ನಾಗಮಂಗಲದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಾಗಮಂಗಲ ಕನ್ನಡ ಸಂಘ ವಿಶ್ವಸ್ಥ ಸಮಿತಿ ಆಯೋಜಿಸಿರುವ 17ನೇ ವರ್ಷದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿ ಅವರಿಗೆ ರಂಗಗೌರವ ನೀಡಲಾಯಿತು. 
ಮಂಡ್ಯ

ನಾಗಮಂಗಲ ಕನ್ನಡ ಸಂಘ ಸಮಾಜಮುಖಿ ಕಾರ್ಯ ಶ್ಲಾಘನೀಯ

ನಾಗಮಂಗಲ: ಕಳೆದ 53 ವರ್ಷಗಳಿಂದ ನಾಡು ನುಡಿಯ ಬಗ್ಗೆ ನಿರಂತರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ನಾಗಮಂಗಲ ಕನ್ನಡ ಸಂಘದ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಮೈಸೂರಿನ ಖ್ಯಾತ ಅನುವಾದಕ ಪ್ರಧಾನ್ ಗುರುದತ್ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ನಾಗಮಂಗಲ ಕನ್ನಡ ಸಂಘ ವಿಶ್ವಸ್ಥ ಸಮಿತಿ ಭಾನುವಾರ ಸಂಜೆ ಆಯೋಜಿಸಿದ್ದ 17ನೇ ವರ್ಷದ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ರಾಜ್ಯ ಹಾಗೂ ರಾಷ್ಟ್ರದ ಅನೇಕ ಕನ್ನಡ ಸಂಘಗಳ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿದ್ದೇನೆ. ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ. ಆದರೆ ನಾಗಮಂಗಲ ಕನ್ನಡ ಸಂಘ ನೀಡಿರುವ ಗೌರವ ಅತ್ಯಂತ ಸಂತೋಷ ತಂದುಕೊಟ್ಟಿದೆ. ಕಳೆದ 53 ವರ್ಷಗಳ ದೀರ್ಘ ಕಾಲ ಒಂದು ಸಂಘ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಸಕ್ರೀಯವಾಗಿರುವುದು ಸಾಮಾನ್ಯವಲ್ಲ. ಇದಕ್ಕೆ ಇಲ್ಲಿನ ಕನ್ನಡ ಪ್ರೇಮಿಗಳು ನೀಡುತ್ತಿರುವ ಪ್ರೋತ್ಸಾಹ ಕಾರಣವಾಗಿದೆ. ಜನ ಸಾಮಾನ್ಯರ ಬೆಂಬಲ ಇಲ್ಲದಿದ್ದರೆ ಯಾವುದೇ ಸಂಘ ಇಷ್ಟು ದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿ ಚೇತನಗೊಳಿಸಿದ ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ ಅವರ ಸಮ್ಮುಖದಲ್ಲಿ ನುಡಿ ಗೌರವ ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.
ರಂಗ ಗೌರವ ಸ್ವೀಕರಿಸಿದ ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿ ಮಾತನಾಡಿ, ಇಷ್ಟೊಂದು ಕನ್ನಡಾಭಿಮಾನಿಗಳು ಮತ್ತು ರಂಗಾಸಕ್ತರನ್ನು ನೋಡಿ ಕಣ್ತುಂಬಿಕೊಳ್ಳುವ ಸೌಭಾಗ್ಯವನ್ನು ಇಲ್ಲಿನ ಕನ್ನಡ ಸಂಘ ನನಗೆ ಒದಗಿಸಿಕೊಟ್ಟಿದೆ. ಇಲ್ಲಿನ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ಏಳು ದಿನಗಳವರೆಗೆ ನಡೆಯುವ ನಾಗರಂಗ ನಾಟಕೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಂಘದ ಸದಸ್ಯ ಹಾಗೂ ನಿವೃತ್ತ ಪ್ರಾಂಶುಪಾಲ ರಘುನಾಥ್‌ಸಿಂಗ್ ಪ್ರಾಸ್ತಾವಿಕ ನುಡಿಯೊಂದಿಗೆ ಕಳೆದ 53 ವರ್ಷಗಳಿಂದ ಕನ್ನಡ ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷೆ ಪುಟ್ಟಮ್ಮಮಾಯಣ್ಣಗೌಡ ನಾಗರಂಗ ನಾಟಕೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಪಟ್ಟಣದ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಚ್ಚೇವು ಕನ್ನಡದ ದೀಪ ಹಾಡಿಗೆ ಸ್ವಾಗತ ನೃತ್ಯ ಪ್ರದರ್ಶಿಸಿದರು.
ಮೆರಗು ನೀಡುತ್ತಿರುವ ಮಳಿಗೆಗಳು: ನಾಟಕೋತ್ಸವ ನಡೆಯುತ್ತಿರುವ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡ ಮತ್ತು ಆವರಣವನ್ನು ವಿಶೇಷ ರೀತಿಯಲ್ಲಿ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಅಲ್ಲದೆ ಸಿದ್ಧ ಉಡುಪುಗಳು, ಅಲಂಕಾರಿಕ ವಸ್ತುಗಳು, ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ, ತಿಂಡಿ ತಿನಿಸು, ಪುಸ್ತಕ ಮಳಿಗೆ, ಆಹಾರ ಮಳಿಗೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಬಗೆಯ ಅಂಗಡಿ ಮಳಿಗೆಗಳು ಕಾಲೇಜು ಮುಂಭಾಗದಲ್ಲಿ ತೆರೆದುಕೊಂಡು ನಾಟಕೋತ್ಸವಕ್ಕೆ ಮೆರಗು ನೀಡುತ್ತಿವೆ. ರಂಗಾಸಕ್ತರು ವಿವಿಧ ಬಗೆಯ ತಿಂಡಿ ತಿನಿಸುಗಳ ರುಚಿಯನ್ನು ಸವಿದರು. ಒಟ್ಟಾರೆ ನಾಗಮಂಗಲ ಪಟ್ಟಣದಲ್ಲಿ ಒಂದು ವಾರ ನಾಟಕಗಳ ಜಾತ್ರೆಯ ಸಂಭ್ರಮ ಮನೆಮಾಡಿದೆ.
ನ.25ರ ಸಂಜೆ 7.15 ಕ್ಕೆ ಮಂಜು ಕೊಡಗು ನಿರ್ದೇಶನದ ನೀನಾಸಂ, ಹೆಗ್ಗೋಡು ಪ್ರಸ್ತುತಿಯ ಮೀಡಿಯಾ ನಾಟಕ ಪ್ರದರ್ಶನಗೊಳ್ಳಲಿದೆ.