ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಯುವಜನ ಇಲಾಖೆಯ ಸಹಾಯಕ ನಿರ್ದೇಶಕರಾದ ಓಂ ಪ್ರಕಾಶ್, ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪರೀಕ್ಷಾಂಗ ರಿಜಿಸ್ಟ್ರಾರ್ ಡಾ.ನಾಗರಾಜು, ಮೈ ಭಾರತ್ ಸಂಸ್ಥೆಯ ಹರ್ಷ ಹಾಗೂ ಆದಿಚುಂಚನಗಿರಿ ಆಸ್ಪತ್ರೆಯ ಪಿಆರ್‌ಒ ಧರ್ಮೇಂದ್ರ ಮತ್ತಿತರಿದ್ದರು. 
ಮಂಡ್ಯ

ದೇಶದ ಏಕತೆ, ಸಮಗ್ರತೆಗೆ ಪಣತೊಟ್ಟವರು ವಲ್ಲಭಬಾಯಿ ಪಟೇಲ್

ನಾಗಮಂಗಲ: ಭಾರತವು ಏಕತೆ ಮತ್ತು ಸಮಗ್ರತೆಯನ್ನು ಬೆಳೆಸಿಕೊಳ್ಳುವಲ್ಲಿ, ಆದರ್ಶ ರಾಷ್ಟ್ರದ ಕನಸು ಹೊತ್ತ ಸ್ವಾತಂತ್ರೃ ಸೇನಾನಿ ಹಾಗೂ ಪ್ರಥಮ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಸ್ಮರಿಸುವ ಪುಣ್ಯ ದಿನವೆಂದು ಆದಿಚುಂಚನಗಿರಿ ಮಠದ ಬಿಜಿ ನಗರ ಶಾಖೆಯ ಶ್ರೀಸತ್‌ಕೀರ್ತಿನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬಿಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಸರ್ದಾರ್-150 ಎಂಬ ಸರ್ದಾರ್ ವಲ್ಲಭಾಯಿ ಪಟೇಲರ 150ನೇ ಜನ್ಮದಿನೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮಂಡ್ಯ, ಮೈ ಭಾರತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮಂಡ್ಯ, ಎನ್‌ಎಸ್‌ಎಸ್ ಘಟಕಗಳು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಂಡ್ಯ ಜಿಲ್ಲಾ ಮಟ್ಟದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಮಹಾನ್ ನಾಯಕ ಹಾಗೂ ರಾಷ್ಟ್ರಪ್ರೇಮಿ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಉಕ್ಕಿನ ಮನುಷ್ಯ, ದೂರದೃಷ್ಟಿ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಇವರ ಸ್ಮರಣಾರ್ಥ ಭಾರತ ಸರ್ಕಾರವು ಘೋಷಿಸಿದ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲು ಉತ್ಸುಕರಾಗಿದ್ದೇವೆ. ಈ ನಿಮಿತ್ತ ಸರ್ದಾರರ ಗೌರವಾರ್ಥ ಜಿಲ್ಲಾಮಟ್ಟದ ಏಕತಾ ನಡಿಗೆ ಯಶಸ್ವಿಯಾಗಲಿ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸ್ವಯಂಸೇವಕರಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಶುಭಕೋರಿದರು.
ಮಂಡ್ಯ ಜಿಲ್ಲಾ ಯುವಜನಾಧಿಕಾರಿ ಎಸ್.ಶ್ರುತಿ ಮಾತನಾಡಿ, ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆಗಳು ಭಾರತೀಯ ಇತಿಹಾಸದಲ್ಲಿ ಸದಾ ಸ್ಮರಣೀಯ ಪಾತ್ರ ವಹಿಸುತ್ತವೆ. ಗುಜರಾತ್‌ನಲ್ಲಿ ಇವರ ಏಕತಾ ಪ್ರತಿಮೆಯನ್ನು ಸ್ಥಾಪಿಸಿ ಒಂದೇ ಭಾರತ ಆತ್ಮ ನಿರ್ಭರ ಭಾರತ ಎಂದು ಅಭಿಮಾನದ ನುಡಿಗಳನ್ನು ಘೋಷಿಸಿದೆ. ಬ್ರಿಟಿಷ್ ಭಾರತದ 500ಕ್ಕೂ ಹೆಚ್ಚು ರಾಜ ಮನೆತನದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದ ಕೀರ್ತಿ ವಲ್ಲಭಭಾಯಿ ಪಟೇಲ್ ಅವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವ್ಯಕ್ತಿಯ 150ನೇ ಜನ್ಮ ದಿನೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ. ಇಡೀ ದೇಶ ಇಂತಹ ಸಾರ್ಥಕ ಕಾರ್ಯಕ್ರಮವನ್ನು ಸಂಘಟಿಸಿ ಗೌರವ ಸಲ್ಲಿಸುತ್ತಿದೆ ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ ಮಾತನಾಡಿ, ಭಾರತದ ಮಹಾನ್ ನಾಯಕ, ಕ್ವಿಟ್ ಇಂಡಿಯಾ ಚಳುವಳಿಯನ್ನು ಅತ್ಯಂತ ಪರಿಣಾಮಕಾರಿಯಾಗಿಸಲು ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯು ಅಂದಿನ ಸ್ವಾತಂತ್ರೃ ಸೇನಾನಿಗಳಿಗೆ ಸ್ಫೂರ್ತಿಯೊಂದಿಗೆ ಶಕ್ತಿಯನ್ನು ನೀಡಿತ್ತು. ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ತಮ್ಮ ಧೈರ್ಯ ಸಾಮರ್ಥ್ಯಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ಇಂದಿನ ಯುವಕರು ಈ ಮಹಾನ್ ವ್ಯಕ್ತಿಯ ಆದರ್ಶಗಳನ್ನು, ಏಕತೆಯ ಮೌಲ್ಯಗಳನ್ನು ಬೆಳೆಸಿಕೊಂಡು ಮುನ್ನಡೆದರೆ ಪ್ರಗತಿ ಹೊಂದಿದ ರಾಷ್ಟ್ರವಾಗಿ ಭಾರತ ವಿಶ್ವಗುರುವಾಗುವ ಕಾಲ ದೂರವಿಲ್ಲ ಎಂದರು.
ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಮುಖ್ಯ ಸಂಯೋಜನಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿದರು. ತಹಸೀಲ್ದಾರ್ ಜಿ.ಆದರ್ಶ ಅವರು ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕ್ರೀಡಾಂಗಣದಿಂದ ಬೆಳ್ಳೂರು ಕ್ರಾಸ್‌ವರೆಗಿನ ಸುಮಾರು ಐದು ಕಿ.ಮೀ.ಏಕತಾ ಪಾದಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು. 1200ಕ್ಕೂ ಹೆಚ್ಚು ಸ್ವಯಂಸೇವಕರ ಜತೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಯುವಜನ ಇಲಾಖೆಯ ಸಹಾಯಕ ನಿರ್ದೇಶಕರಾದ ಓಂ ಪ್ರಕಾಶ್, ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪರೀಕ್ಷಾಂಗ ರಿಜಿಸ್ಟ್ರಾರ್ ಡಾ.ನಾಗರಾಜು, ಮೈ ಭಾರತ್ ಸಂಸ್ಥೆಯ ಹರ್ಷ ಹಾಗೂ ಆದಿಚುಂಚನಗಿರಿ ಆಸ್ಪತ್ರೆಯ ಪಿಆರ್‌ಒ ಧರ್ಮೇಂದ್ರ ಮತ್ತಿತರಿದ್ದರು.