ನಾಗಮಂಗಲ ತಾಲೂಕಿನ ಎಚ್.ಎನ್.ಕಾವಲ್‌ನ ಬೆಟ್ಟದಗುಡಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ನಾಗನಕೆರೆ ಗಿಡದ ಜಾತ್ರೆಯಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ನಾಗಮಂಗಲ: ತಾಲೂಕಿನ ಎಚ್.ಎನ್.ಕಾವಲ್ ಬಳಿಯಿರುವ ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಬೆಟ್ಟದಗುಡಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಅರಣ್ಯ ಪ್ರದೇಶದಲ್ಲಿರುವ ಗಿಡಮರಗಳ ನಡುವೆ ನಡೆದ ಒಂದು ದಿನದ ಜಾತ್ರೆಯಲ್ಲಿ ತಿರುಪತಿ ತಿಮ್ಮಪ್ಪನ ಸಹಸ್ರಾರು ಭಕ್ತ ಸಮೂಹವೇ ಪಾಲ್ಗೊಂಡು ಮುಡಿ ಬಾಯಿಬೀಗ, ಕೇಶಮುಂಡನೆಯ ಹರಕೆ ತೀರಿಸಿದ ಬಳಿಕ ಗೋವಿಂದ ನಾಮಸ್ಮರಣೆ ಮಾಡುವ ಮೂಲಕ ಭಕ್ತಿನಮನ ಸಲ್ಲಿಸಿದರು.
ಈ ಹಿಂದಿನ ಪದ್ಧತಿಯಂತೆ ತಿರುಪತಿಗೆ ತೆರಳುವ ಮೊದಲು ಹರಕೆ ಹೊತ್ತ ಭಕ್ತರು ಈ ಜಾತ್ರೆಗೆ ಬಂದು ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಆಸುಪಾಸಿನಲ್ಲಿರುವ ಗಿಡ ಮರಗಳ ಮದ್ಯದಲ್ಲಿ ದಾಸಭಕ್ತರು ತರುವ ದೇವರ ಮುಖಸಿರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ, ತಾವು ಮಾಡಿ ತಂದಿದ್ದ ಮಾಂಸದೂಟವನ್ನು ದೇವರಿಗೆ ನೈವೇದ್ಯವಿಟ್ಟು, ನಂತರ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಸುವ ಮೂಲಕ ಸಂಜೆಯಾಗುತ್ತಿದ್ದಂತೆ ತಮ್ಮ ಮುಂದಿನ ಪ್ರಯಾಣ ಬೆಳೆಸಿದರು.
ತಿರುಪತಿಗೆ ಹೋಗಲು ಸಾಧ್ಯವಾಗದ ಭಕ್ತರು ಬಾಯಿಬೀಗ, ಮುಡಿ ಸೇವೆಯೊಂದಿಗೆ ಇಲ್ಲಿಯೇ ದೇವರ ಹರಕೆ ತೀರಿಸಿಕೊಂಡರು. ಒಂದು ದಿನ ನಡೆಯುವ ಈ ಜಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.
ಇಡೀ ಜಾತ್ರೆಯಲ್ಲಿ ನೂರಾರು ದಾಸ ಭಕ್ತರ ಶಂಖ, ಜಾಗಟೆಗಳ ಸದ್ದಿನೊಂದಿಗೆ ಗೋವಿಂದ ನಾಮಸ್ಮರಣೆ ಮೊಳಗಿದವು.
ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನವನ್ನು ವಿಶೇಷ ರೀತಿಯಲ್ಲಿ ಸಿಂಗರಿಸಲಾಗಿತ್ತು. ನೆರೆದಿದ್ದ ಸಹಸ್ರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದು ಭಕ್ತಿಭಾವ ಸಮರ್ಪಿಸಿದರು.
ಅಪಾರ ಸಂಖ್ಯೆಯಲ್ಲಿ ಸೇರುವ ಭಕ್ತರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆ ವತಿಯಿಂದ ತಾತ್ಕಾಲಿಕ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗಿತ್ತು. ಜಾತ್ರಾ ಮಹೋತ್ಸವ ನಡೆಯುವ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.