ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ನಾಟನಹಳ್ಳಿ, ಬಿ.ಬಾಚಹಳ್ಳಿ, ಹೆಮ್ಮಡಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು. ಜೆಡಿಎಸ್ ಮುಖಂಡ ಬೋರ್‌ವೆಲ್ ಮಹೇಶ್, ಲೋಕೋಪಯೋಗಿ ಇಲಾಖೆಯ ಎಇಇ ರಾಝಿಕಾ, ಇಂಜಿನಿಯರ್ ಬಸವೇಗೌಡ, ಎನ್.ಆರ್.ರಮೇಶ್, ಬಳ್ಳೇಕೆರೆ ಮನು, ಎಚ್.ಡಿ.ಅಶೋಕ್, ಯುವ ಮುಖಂಡ ಶರತ್ ಚಂದ್ರ ಇತರರು ಇದ್ದರು.
- ಶಾಸಕ ಎಚ್.ಟಿ.ಮಂಜು ಹೇಳಿಕೆ
- ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ಕೆ.ಆರ್.ಪೇಟೆ: ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಏಕಮಾತ್ರ ಧ್ಯೇಯ. ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ರಸ್ತೆಗಳು ಅಭಿವೃದ್ಧಿಯಾಗದರೆ ತಾಲೂಕಿಗೂ ಒಳ್ಳೆಯ ಹೆಸರು ಬರಲಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ತಾಲೂಕಿನ ಬೂಕನಕೆರೆ ಹೋಬಳಿಯ ನಾಟನಹಳ್ಳಿ, ಬಿ.ಬಾಚಹಳ್ಳಿ, ಹೆಮ್ಮಡಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಸಾಕಷ್ಟು ಕಡೆಗಳಲ್ಲಿ ಹತ್ತಾರು ವರ್ಷಗಳಿಂದ ಡಾಂಬರು ಕಾಣದ ಗುಂಡಿ ರಸ್ತೆಗಳೇ ಇವೆ. ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹಾಗೂ ಶಿಥಿಲಗೊಂಡಿರುವ ಸೇತುವೆಗಳ ಮರು ನಿರ್ಮಾಣ ಮಾಡಬೇಕಾದರೆ. ಇದಕ್ಕೆ ಕನಿಷ್ಠ 500 ಕೋಟಿ ರೂ. ಅಗತ್ಯವಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ನನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆದರೂ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಅಲ್ಪ ಸ್ವಲ್ಪ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದು ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಅದ್ಯತೆ ನೀಡಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದೇನೆ. ಶಾಸಕರಿಗೆ ನೀಡುತ್ತಿರುವ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ಪ್ರತಿಯೊಂದು ಗ್ರಾಮಕ್ಕೂ ತಲಾ 10 ಲಕ್ಷ ರೂಪಾಯಿಗಳಂತೆ ಹಂಚಿಕೆ ಮಾಡಿ ಗ್ರಾಮಗಳಲ್ಲಿ ತೀರಾ ಹದಗೆಟ್ಟಿರುವ ರಸ್ತೆ ಹಾಗೂ ಬಾಕ್ಸ್ ಡ್ರೈನೇಜ್ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಈ ಬಾರಿ ನಾನು ಶಾಸಕನಾಗಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 2028ಕ್ಕೆ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರ ಬರುವುದು ಸೂರ್ಯ ಚಂದ್ರರು ಉದಯಿಸುವಷ್ಟೇ ಸತ್ಯ. ಆದ್ದರಿಂದ ತಾಲೂಕಿನ ಜನರು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿದರೆ ಸರ್ವಾಂಗೀಣ ಅಭಿವೃದ್ಧ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೈನಿಕರಿದ್ದಂತೆ. ನಮ್ಮ ತಾಲೂಕಿನಲ್ಲಿ ಸದಾ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇಂತಹ ಚಿನ್ನದಂತಹ ಕಾರ್ಯಕರ್ತರು ಸ್ಪರ್ಧಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರ ಗೆಲುವಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಜೆಡಿಎಸ್ ಮುಖಂಡ ಬೋರ್‌ವೆಲ್ ಮಹೇಶ್, ಲೋಕೋಪಯೋಗಿ ಇಲಾಖೆಯ ಎಇಇ ರಾಝಿಕಾ, ಇಂಜಿನಿಯರ್ ಬಸವೇಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಎನ್.ಆರ್.ರಮೇಶ್, ಬಳ್ಳೇಕೆರೆ ಮನು, ಪುರಸಭಾ ಮಾಜಿ ಸದಸ್ಯ ಎಚ್.ಡಿ.ಅಶೋಕ್, ಯುವ ಮುಖಂಡ ಶರತ್ ಚಂದ್ರ, ಪರಶರಣ್, ಬಳ್ಳೇಕೆರೆ ಕುಮಾರ, ಚೌಡೇನಹಳ್ಳಿ ಕಿಟ್ಟಿ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ನಾಟನಹಳ್ಳಿ, ಬಿ.ಬಾಚಳ್ಳಿ, ಹೆಮ್ಮಡಹಳ್ಳಿ ಗ್ರಾಮದ ಮುಖಂಡರು, ಯುವಕರು, ಗ್ರಾಮಸ್ಥರು ಇದ್ದರು.