ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ಎ.ಡಿ.ಕಾಲನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಮೈಸೂರು ರಸ್ತೆಯಲ್ಲಿರುವ ಯಾ-ಹಲ್ಲಾ ಮಸೀದಿ ಮುಂಭಾಗದಲ್ಲಿ ಮುಸ್ಲಿಂ ಯುವಕರು ಗಣೇಶ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಿದರು. 
ಮಂಡ್ಯ

ಮುಸ್ಲಿಂ ಯುವಕರಿಂದ ವಿನಾಯಕನಿಗೆ ಜೈಕಾರ

ಪ್ರಮುಖ ಮುಖ್ಯಾಂಶಗಳು

  • ಸಾಮರಸ್ಯ ಸಂದೇಶ ಸಾರಿದ ಗಣೇಶ ಮೆರವಣಿಗೆ
  • ಪುಷ್ಪಾರ್ಚನೆ, ಘೋಷಣೆ.
ನಾಗಮಂಗಲ: ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಯುವಕರು ಒಟ್ಟಾಗಿ ಸೇರಿ ಸೌಹಾರ್ದತೆ ಮೆರೆದರು.
ಮೈಸೂರು ರಸ್ತೆಯ ಯಾ-ಹಲ್ಲಾ ಮಸೀದಿ ಮುಂಭಾಗದಲ್ಲಿ ಗಣೇಶ ಮೂರ್ತಿಗೆ ಮುಸ್ಲಿಂ ಯುವಕರು ಪುಷ್ಪಾರ್ಚನೆಯೊಂದಿಗೆ ಹೂವಿನ ಹಾರ ಹಾಕಿ ಗಣಪತಿ ಬಪ್ಪ ಮೋರಿಯಾ ಘೊಷಣೆ ಮೊಳಗಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವ ಮೂಲಕ ಸಾಮರಸ್ಯದ ಸಂದೇಶ ಸಾರಿದರು.
ಪಟ್ಟಣದ ಮೈಸೂರು ರಸ್ತೆಯ ಎ.ಡಿ.ಕಾಲನಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ವಿಸರ್ಜಿಸುವ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ವಿಶೇಷ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಮುಸ್ಲಿಂ ಯುವಕರು ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆ ವಿಸರ್ಜನಾ ಪೂರ್ವ ಮೆರವಣಿಗೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಸ್ಲಿಂ ಮುಖಂಡರು ಹಾಗೂ ಯುವಕರು ಗಣೇಶೋತ್ಸವ ಸಮಿತಿಯವರೊಂದಿಗೆ ಕೈಜೋಡಿಸಿದರು. ವಿಶೇಷ ಪೂಜೆ ಮುಗಿದ ನಂತರ ಗಣೇಶ ಮೂರ್ತಿಯನ್ನು ಮುಸ್ಲಿಂ ಯುವಕರೇ ಅಲಂಕರಿಸಿದ್ದ ಟ್ರ್ಯಾಕ್ಟರ್‌ನಲ್ಲಿರಿಸಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಗಣೇಶ ಮೆರವಣಿಗೆಯನ್ನು ಯಾ-ಹಲ್ಲಾ ಮಸೀದಿ ಮುಂಭಾಗಕ್ಕೆ ತಂದು ಹಾರ ಹಾಕಿ ಮೆರವಣಿಗೆಯನ್ನು ಬೀಳ್ಕೊಟ್ಟರು.
ಈ ವೇಳೆ ಪಟ್ಟಣದ ಮುಸ್ಲಿಂ ಮ್ಯಾನೇಜಿಂಗ್ ಕಮಿಟಿ ಕಾರ್ಯದರ್ಶಿ ಇರ್ಷಾದ್ ಪಾಷ ಮಾತನಾಡಿ, ನಾಗಮಂಗಲದಲ್ಲಿ ಹಿಂದೂ ಮುಸ್ಲಿಮರು ಸಹೋದರರಂತೆ ಯಾವುದೇ ಗಲಾಟೆ ಗೊಂದಲವಿಲ್ಲದೆ ಒಂದೇ ಮನಸ್ಸು, ಪ್ರೀತಿ ವಿಶ್ವಾಸದಿಂದ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಇತಿಹಾಸಕ್ಕೆ ಬರೆದಿದ್ದೇವೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಸಂದೇಶ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ಹಾಗಾಗಿ ಗಣೇಶೋತ್ಸವದ ವೇಳೆ ಶಾಂತಿ ನೆಮ್ಮದಿ ಕದಡುವ ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ಹಿಂದೂ ಮುಸ್ಲಿಮರು ಅಣ್ಣ ತಮ್ಮಂದಿರಂತೆ ಹಬ್ಬಗಳನ್ನು ಆಚರಿಸುತ್ತೇವೆ ಎಂದರು.
ಸಹೋದರತ್ವ ಭಾವನೆ ತೋರಿದ ಹಿಂದೂ-ಮುಸ್ಲಿಂ ಯುವಕರ ಕಾರ್ಯಕ್ಕೆ ಡಿವೈಎಸ್‌ಪಿ ಬಿ.ಚಲುವರಾಜು, ಪಟ್ಟಣ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಕುಮಾರ್, ಗ್ರಾಮಾಂತರ ಸಿಪಿಐ ಹೇಮಂತ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.