ಮಳವಳ್ಳಿ: ತಾಲೂಕಿನ ಅಕ್ಕಮ್ಮನಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಕೊಲೆಮಾಡಿ ಮನೆಯ ಪಡಸಾಲೆಯಲ್ಲಿ ಬಿಸಾಡಿ ಹೋಗಿದ್ದಾರೆ.
ಗ್ರಾಮದ ವೀರಭದ್ರಪ್ಪ ಎಂಬುವರ ಪುತ್ರ ಮಂಜು(44) ಕೊಲೆಯಾಗಿರುವ ವ್ಯಕ್ತಿ. ಇವರು ಹಲವು ವರ್ಷಗಳಿಂದ ಟಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ ಕುಟುಂಬ ಸಮೇತ ನೆಲೆಸಿದ್ದರು. ಭಾನುವಾರ ತಾಲೂಕಿನ ದುಗ್ಗನಹಳ್ಳಿ ಗ್ರಾಮದ ಸಂಬಂಧಿಕರ ಮನೆಯ ಗೃಹಪ್ರವೇಶ ಕಾರ್ಯಕ್ಕೆ ಬಂದಿದ್ದರು ಎನ್ನಲಾಗಿದ್ದು, ಸೋಮವಾರ ಬೆಳಗ್ಗೆ ಸ್ವಗ್ರಾಮದ ತನ್ನದೆ ಮನೆ ಪಡಸಾಲೆ ಮೇಲೆ ರಕ್ತಸಿಕ್ತವಾಗಿ ಮೃತದೇಹ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದ್ದು, ಒಳ ಉಡುಪು ಹೊರತುಪಡಿಸಿ ಮೃತನ ಮೈ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ಮುಖದ ಮೇಲೆ ಗಾಯಗಳಾಗಿರುವುದರಿಂದ ಬೇರೆಡೆ ಕೊಲೆ ಮಾಡಿ ಮೃತದೇಹವನ್ನು ತಂದು ಹಾಕಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಅಡಿಷನಲ್ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಮಿಮ್ಸ್ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.