ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ಮುದ್ದನಘಟ್ಟ ಗ್ರಾಮದ ಮುಖಂಡ ಮಹಾಲಿಂಗೇಗೌಡ ನೇತೃತ್ವದಲ್ಲಿ ಮಂಡ್ಯದಲ್ಲಿ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
- ಕೈಗಾರಿಕೆ ಸ್ಥಾಪನೆಗೆ ಭೂ ಸ್ವಾಧೀನಕ್ಕೆ ವಿರೋಧ
- ಬೀದಿಗಿಳಿದ ಮುದ್ದನಘಟ್ಟ ಗ್ರಾಮದ ಜನರು
- ತಹಸೀಲ್ದಾರ್ ವಿಶ್ವನಾಥ್ ಗೆ ಮನವಿ ಸಲ್ಲಿಕೆ
ಮಂಡ್ಯ: ತಾಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಗ್ರಾಮದ ಸರ್ವೇ ನಂಬರ್ 48ರ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಒತ್ತಾಯಿಸಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಮುಖಂಡ ಮಹಾಲಿಂಗೇಗೌಡ ನೇತೃತ್ವದಲ್ಲಿ ಗ್ರಾಮಸ್ಥರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮುದ್ದನಘಟ್ಟ ಗ್ರಾಮದ ಸರ್ವೇ ನಂಬರ್ 48ರಲ್ಲಿ ಸುಮಾರು 150 ಎಕರೆ ಭೂಮಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಒಕ್ಕಲಿಗ ಜನಾಂಗಕ್ಕೆ ಸೇರಿದ ಗ್ರಾಮಸ್ಥರು ಸುಮಾರು 60 ವರ್ಷದಿಂದ ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಕೆಲವರಿಗೆ ಈಗಾಗಲೇ ಭೂ ಮಂಜೂರಾಗಿ ಪಹಣಿ ನಮೂದಾಗಿರುತ್ತದೆ. ಇನ್ನೂ ಹಲವರಿಗೆ ಮಂಜೂರಾತಿ ಬಾಕಿ ಇದ್ದು, ಫಾರ್ಮ್ 50, 53, 57ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಭೂ ಮಂಜೂರಾತಿಗೆ ಕಾಯುತ್ತಿದ್ದಾರೆ. ಇದಲ್ಲದೆ ಈಗಾಗಲೇ ಕೆಲವರು ಕೊಳವೆ ಬಾವಿ ಕೊರೆಸಿ ಕಬ್ಬು, ರಾಗಿ, ತೆಂಗು, ಅಡಿಕೆ ಬೆಳೆಯುತ್ತಿದ್ದಾರೆ ಎಂದರು.
ಆದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರಿಗೆ ಯಾವುದೇ ತಿಳಿವಳಿಕೆ ನೀಡದೆ ಏಕಾಏಕಿ ಸರ್ವೇ ನಂಬರ್ 48ರ ಜಮೀನಿಗೆ ಪ್ರವೇಶ ಮಾಡಿ ಕೈಗಾರಿಕೆ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಸಂಬಂಧ ಜಮೀನು ಸರ್ವೇ ಪ್ರಕ್ರಿಯೆಯೂ ಆರಂಭ ಮಾಡಿದ್ದಾರೆ. ಈ ವಿಷಯವಾಗಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಜನರು ಆರ್ಥಿಕ, ಸಾಮಾಜಿಕವಾಗಿ ಕಡು ಬಡವರಾಗಿರುತ್ತವೆ. ಆದ ಕಾರಣ ನಮಗೆ ಯಾವುದೇ ತಿಳಿವಳಿಕೆ ನೀಡದೆ ಏಕಾಏಕಿ ಜಮೀನಿನ ಸರ್ವೇ ಪ್ರಕ್ರಿಯೆ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂಮಿಯನ್ನೇ ನಂಬಿ ಕೃಷಿ ಮಾಡಿಕೊಂಡು ಬದುಕುತ್ತಿರುವುದರಿಂದ ನಮಗೆ ಅನ್ಯಾಯ ಮಾಡಬಾರದು. ಸರ್ವೇ ನಂ.48ರ ಜಮೀನನ್ನು ಕೈಗಾರಿಕಾ ಉದ್ದೇಶ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ನಮಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಗ್ರಾಮಸ್ಥರಾದ ಮೂಡಲಗಿರಿಯಯ್ಯ, ರಾಮಕೃಷ್ಣ, ವೆಂಕಟೇಶ್, ವಸಂತ್‌ಕುಮಾರ್, ಮರೀಗೌಡ, ದಿನೇಶ್, ರವಿಗೌಡ, ಜಯಲಕ್ಷ್ಮೀ, ತಾಯಮ್ಮ, ಯಶೋದಮ್ಮ, ಚಿಕ್ಕತಾಯಮ್ಮ, ರಾಮೇಗೌಡ, ಸರೋಜಮ್ಮ, ಪುಟ್ಟಮ್ಮ, ರತ್ನಮ್ಮ, ಚೆನ್ನಮ್ಮ, ಜಯಮ್ಮ, ಲಕ್ಷ್ಮಮ್ಮ ಇತರರಿದ್ದರು.