ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ)ಲ್ಲಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು.
- ಶಾಸಕ ಪಿ.ರವಿಕುಮಾರ್ ಗಣಿಗ ಭಾಗಿ
ಮಂಡ್ಯ: ನಗರದ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವರ್ತುಲ ರಸ್ತೆಯನ್ನು ಈಗ ಗುರುತಿಸಿರುವ ಜಾಗಕ್ಕಿಂತ 3 ಕಿ.ಮೀ. ದೂರದಲ್ಲಿ ನಿರ್ಮಾಣ ಮಾಡುವ ಕುರಿತು ಡಿಪಿಆರ್ ಮತ್ತು ಮಾಸ್ಟರ್ ಪ್ಲಾನ್ ರಚನೆ ಸಂಬಂಧ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಅವರ ಸಮ್ಮುಖದಲ್ಲಿ ಹಾಗೂ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಗರದ ಮುಡಾ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2ನೇ ಸಾಮಾನ್ಯ ಸಭೆಯಲ್ಲಿ ವರ್ತುಲ ರಸ್ತೆ ನಿರ್ಮಾಣ ಸೇರಿದಂತೆ ಹಲವು ವಿಷಯದ ಬಗ್ಗೆ ಗಂಭೀರ ಚರ್ಚೆ ನಡೆಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಎರಡು ದಶಕದ ಹಿಂದೆ ನಗರದ ಹೊರವಲಯದ ಶ್ರೀನಿವಾಸಪುರದಿಂದ ಇಂಡುವಾಳು ಗ್ರಾಮದವರೆಗೆ ಸುಮಾರು ಏಳೆಂಟು ಕಿ.ಮೀ.ಉದ್ದದ ವರ್ತುಲ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಭೂಸ್ವಾಧೀನ, ರಸ್ತೆ ನಿರ್ಮಾಣಕ್ಕಾಗಿ ಸುಮಾರು 300 ಕೋಟಿ ರೂ.ಅಂದಾಜು ವೆಚ್ಚದ ಡಿಪಿಆರ್ ಸಹ ಸಿದ್ಧವಾಗಿತ್ತು. ಆದರೆ, ಹಣಕಾಸಿನ ಕೊರತೆಯಿಂದಾಗಿ ಯೋಜನೆ ನನೆಗುದಿಗೆ ಬಿದ್ದಿತ್ತು.
ಈ ಮಧ್ಯೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ವರ್ತುಲ ರಸ್ತೆಗೆ ಮರುಜೀವ ಬಂದಿದೆ. ಕೆಲವು ತಿಂಗಳ ಹಿಂದೆ ನಡೆದ ದಿಶಾ ಸಮಿತಿ ಸಭೆಯಲ್ಲಿ ಮುಡಾದಲ್ಲಿ ವರ್ತುಲ ರಸ್ತೆಯ ವಿಚಾರ ಪ್ರಸ್ತಾಪಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಸ್ತೆಯನ್ನು ಈಗಿರುವ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದರು. ಜತೆಗೆ, ಮುಡಾ ವ್ಯಾಪ್ತಿಯ ಪ್ರದೇಶದಿಂದ ರಸ್ತೆ ಹಾದುಹೋಗುವುದರಿಂದ ಹಾಗೂ ಮುಡಾದಲ್ಲಿ ಇಂಜಿನಿಯರ್‌ಗಳು, ಭೂಸ್ವಾಧೀನಾಧಿಕಾರಿಗಳು ಇಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ರಸ್ತೆ ನಿರ್ಮಿಲಾಗುತ್ತಿದೆ. ಇದಕ್ಕೆ ನೀವು(ಮುಡಾ ಅಧಿಕಾರಿಗಳು) ಸಹಕರಿಸಿ ಎಂದು ಹೇಳಿದ್ದರು.
ಇದೇ ವಿಚಾರವನ್ನು ಮುಡಾ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ, ಉದ್ದೇಶಿತ ಜಾಗಕ್ಕೆ ಮೂರು ಕಿ.ಮೀ. ದೂರದಲ್ಲೇ ರಸ್ತೆ ನಿರ್ಮಿಸುವುದು ಸೂಕ್ತ. ಈಗಾಗಲೇ ಮಂಡ್ಯ ನಗರದ ಉತ್ತರ ದಿಕ್ಕಿನಲ್ಲಿ ಬೈಪಾಸ್ ರಸ್ತೆ ಇದೆ. ಈಗ ದಕ್ಷಿಣ ದಿಕ್ಕಿನಲ್ಲೂ ಬೂದನೂರಿನಿಂದ ಸುಂಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿ ರಸ್ತೆ ನಿರ್ಮಿಸುವುದರಿಂದ ಮಂಡ್ಯ ನಗರದ ಸುತ್ತ ರಿಂಗ್‌ರೋಡ್ ಆಗಲಿದೆ. ಇದರಿಂದ ಮಂಡ್ಯ ನಗರದ ಬೆಳವಣಿಗೆಗೂ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಡಿಪಿಆರ್ ಸಿದ್ಧಪಡಿಸಿ, ರಸ್ತೆ ಮಾರ್ಗದ ಮಾಹಿತಿಯನ್ನು ನೀಡಿದರೆ ಅದರ ಪ್ರಕಾರ ಮುಡಾದಿಂದ ಹೊಸದಾಗಿ ಮಹಾಯೋಜನೆ(ಮಾಸ್ಟರ್ ಪ್ಲಾನ್) ತಯಾರಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಮುಡಾ ಆಯುಕ್ತ ಎಂ.ಪಿ.ಕೃಷ್ಣಕುಮಾರ್, ನಿರ್ದೇಶಕರಾದ ಕಲ್ಲಹಳ್ಳಿ ಕಾರ್ತಿಕ್, ಸಾತನೂರು ಮಹೇಶ್, ಇದ್ರಿಸ್‌ಕಾನ್, ಕಮಲರಾಜು, ನಗರ ಯೋಜನೆ ವ್ಯವಸ್ಥಾಪಕ ಪ್ರವೀಣ್, ಸೆಸ್ಕ್ ಸಹಾಯಕ ಇಂಜಿನಿಯರ್ ಮಹೇಶ್, ಪೌರಾಯುಕ್ತೆ ಯು.ಪಿ.ಪಂಪಶ್ರೀ ಭಾಗವಹಿಸಿದ್ದರು.
ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳಿ
ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಮುಡಾದಿಂದ ನಿರ್ಮಿಸಿರುವ ಸಾಹುಕಾರ್ ಚನ್ನಯ್ಯ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಲು ತಯಾರಿ ಮಾಡಿಕೊಳ್ಳುವಂತೆ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಪೌರಾಯುಕ್ತೆ ಯು.ಪಿ.ಪಂಪಶ್ರೀ ಅವರಿಗೆ ನಿರ್ದೇಶನ ನೀಡಿದರು. ಸಾಹುಕಾರ್ ಚನ್ನಯ್ಯ ಬಡಾವಣೆಗೆ ಅಗತ್ಯವಾದ ರಸ್ತೆ ಹಾಗೂ ಇತರ ಮೂಲಸೌಕರ್ಯಗಳನ್ನು ಶಾಸಕರ ನಿಧಿಯ ಅನುದಾನದಿಂದ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತೆ ಯು.ಪಿ.ಪಂಪಶ್ರೀ, ನಗರಸಭೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.