ಮಂಡ್ಯ ನಗರದಲ್ಲಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಅನಧಿಕೃತ ಸೈಟ್‌ಗೆ ನೋಂದಣಿ ಇರಲ್ಲ: ಮುಡಾದಿಂದ ಉಪ ನೋಂದಣಾಧಿಕಾರಿಗೆ ಪತ್ರ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ವಿನ್ಯಾಸ ನಕ್ಷೆ ಅನುಮೋದನೆ ಕಡ್ಡಾಯ
  • ಮುಡಾದಿಂದ ಸ್ಪಷ್ಟ ಸೂಚನೆ
ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗುವ ಬಡಾವಣೆಯಲ್ಲಿನ ನಿವೇಶನವನ್ನು ನೋಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗೆ ಪತ್ರ ಬರೆಯಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.
ನಗರದ ಮುಡಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಬಡಾವಣೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಅದರಂತೆ ವಿನ್ಯಾಸ ನಕ್ಷೆ ಅನುಮೋದನೆ ಪಡೆಯದೆ ರಚನೆಗೊಂಡಿರುವ ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳನ್ನು ಜನರು ಖರೀದಿಸದಂತೆ ಮನವಿ ಮಾಡಲಾಯಿತು. ಅದರಂತೆ ಉಪ ನೋಂದಣಾಧಿಕಾರಿಗೆ ಕಚೇರಿಗೆ ಶೀಘ್ರವೇ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು. ಈ ಮೂಲಕ ಅನಧಿಕೃತ ಬಡಾವಣೆಗಳ ವಿರುದ್ಧ ಮುಡಾ ಸಮರ ಸಾರಿದೆ.
ಮಂಡ್ಯ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಂದಾಯ ಭೂಮಿಯನ್ನೇ ಭೂಮಾಲೀಕರು ಹಾಗೂ ರಿಯಲ್ ಎಸ್ಟೇಟ್ ಏಜೆಂಟರು ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಶಾಸಕ ಪಿ.ರವಿಕುಮಾರ್ ಗಣಿಗ ಅವರ ಅನುಮತಿಯೊಂದಿಗೆ ಅನಧಿಕೃತ ಬಡಾವಣೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ ಜತೆಗೆ ನಿವೇಶನ ನೋಂದಣಿ ತಡೆಗೆ ನಿರ್ಧರಿಸಲಾಯಿತು.
ಸಭೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಹಾಗೂ ಆಯುಕ್ತ ಎಂ.ಪಿ.ಕೃಷ್ಣಕುಮಾರ್ ಅವರು, ಮುಡಾ ವ್ಯಾಪ್ತಿಯಲ್ಲಿ ಸುಮಾರು 20 ರಿಂದ 30 ಅನಧಿಕೃತ ಬಡಾವಣೆ ನಿರ್ಮಾಣವಾಗಿವೆ. ಅವುಗಳಲ್ಲಿ ಸಧ್ಯಕ್ಕೆ 8 ಬಡಾವಣೆಗಳಲ್ಲಿನ ನಿವೇಶನ ಮಾರಾಟ ಮಾಡುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಮುಡಾದಿಂದ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದಿರುವ, ನಿಯಮಗಳಂತೆ 30 ಅಡಿ ರಸ್ತೆಗಳಿಗೆ ಜಾಗ ಬಿಡದಿರುವ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸದಿರುವ ಈ ಅಕ್ರಮ ಬಡಾವಣೆಗಳಲ್ಲಿ ನಿವೇಶನಗಳನ್ನು ನೊಂದಣಿ ಮಾಡದಂತೆ ಉಪ ನೋಂದಣಾಧಿಕಾರಿಗೆ ಇಂದೇ ಮುಡಾದಿಮದ ಲಿಖಿತ ಪತ್ರ ಬರೆಯಲಾಗುವುದು. ಇಂತಹ ಅನಧಿಕೃತ ಬಡಾವಣೆಗಳಲ್ಲಿ ಜನರು ಕೂಡ ನಿವೇಶನಗಳನ್ನು ಖರೀದಿಸಬಾರದು. ಬಡಾವಣೆಯ ವಿನ್ಯಾಸ ನಕ್ಷೆಗೆ ಮುಡಾದಿಂದ ಅನುಮೋದನೆ ಪಡೆಯದಿದ್ದರೆ ಅಂತಹ ಬಡಾವಣೆಯ ನಿವೇಶನಗಳಿಗೆ ಮುಡಾದಿಂದ ಕಟ್ಟಡ ನಿರ್ಮಾಣ ಅನುಮತಿ ಪತ್ರ ನೀಡುವುದಿಲ್ಲ. ಪರವಾನಗಿ ಇಲ್ಲದಿದ್ದರೆ ಬ್ಯಾಂಕ್‌ಗಳಲ್ಲಿ ಸಾಲ ಕೂಡ ದೊರೆಯುವುದಿಲ್ಲ. ಜನರೂ ಕೂಡ ನಿವೇಶನ ಖರೀದಿಸುವಾಗಿ ಆ ಜಾಗವು ಅನ್ಯಕ್ರಾಂತ ಆಗಿದೆಯೇ?. ಮುಡಾದಿಂದ ಲೇಔಟ್ ಪ್ಲಾೃನ್‌ಗೆ ಅನುಮೋದನೆ ದೊರೆತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದಲ್ಲದೆ ಈಗಾಗಲೇ ಅಂತಹ ಬಡಾವಣೆಗಳ ಸ್ಥಳಗಳಿಗೆ ಮುಡಾ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ, ಅವುಗಳ ಮಾಲೀಕರನ್ನು ಪತ್ತೆ ಹಚ್ಚಿಸಿ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಮುಡಾ ನಿರ್ದೇಶಕರಾದ ಕಲ್ಲಹಳ್ಳಿ ಕಾರ್ತಿಕ್, ಮಹೇಶ್, ಕಮಲರಾಜು, ಇದ್ರೀಶ್‌ಖಾನ್, ನಗರ ಯೋಜನಾ ವ್ಯವಸ್ಥಾಪಕ ಪ್ರವೀಣ್ ಹಾಜರಿದ್ದರು.

ಎಂಟು ಬಡಾವಣೆ ಅನಧಿಕೃತ
ಮುಡಾದಿಂದ ಪ್ರಸ್ತುತ ಎಂಟು ಬಡಾವಣೆಯನ್ನು ಅನಧಿಕೃತವೆಂದು ತಿಳಿಸಿದ್ದಾರೆ. ತಾಲೂಕಿನ ಪಣಕನಹಳ್ಳಿಯ ಸರ್ವೇ ನಂ.25/6, ಹೊಳಲು ಸರ್ವೇ ನಂ 48/3, ಕಿರಗಂದೂರು ಸರ್ವೇ ನಂ 116/1ಬಿ2, ಮಂಡ್ಯ ನಗರದ ಸರ್ವೇ ನಂ 255, ಗೋಪಾಲಪುರ ಸರ್ವೇ ನಂ 39/4ಬಿ, ಗುತ್ತಲು ಸರ್ವೇ ನಂ 700 ಮತ್ತು 701, ಕ್ಯಾತುಂಗೆರೆ ಸರ್ವೇ ನಂ 38/4, 38/9 ಹಾಗೂ 45ರಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಸಧ್ಯಕ್ಕೆ ಎಷ್ಟು ಎಕರೆ ಜಮೀನಿದೆ ಎನ್ನುವ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ ಎಂದು ಮುಡಾ ಆಯುಕ್ತ ಎಂ.ಪಿ.ಕೃಷ್ಣಕುಮಾರ್ ತಿಳಿಸಿದರು.

ರಾಜ್ಯಸರ್ಕಾರದಿಂದ ಪತ್ರ
ನಗರದ ಚಿಕ್ಕಮಂಡ್ಯ ಕೆರೆಯಂಗಳದ ಮುಡಾದಿಂದ ರಚನೆಯಾಗಿರುವ ಸ್ವಾಮಿ ವಿವೇಕಾನಂದನಗರ ಬಡಾವಣೆಯಲ್ಲಿನ ನಿವೇಶನಗಳಿಗೆ ಪರವಾನಗಿ ಕೊಡುವುದರ ಜತೆಗೆ ಅವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಧ್ಯಕ್ಷ ಬಿ.ಪಿ.ಪ್ರಕಾಶ್ ತಿಳಿಸಿದರು.
ಇದಲ್ಲದೆ 107 ನಿವೇಶನಗಳ ಅಕ್ರಮ ಹಂಚಿಕೆ, ನಿಮ್ಮ ಆಯ್ಕೆ ಸೇರಿದಂತೆ ವಿವಿಧ ಯೋಜನೆಯಡಿ ನಿವೇಶನ ಹಂಚಿಕೆಯಲ್ಲಾಗಿರುವ ಅಕ್ರಮ, ನಿಯಮ ಉಲ್ಲಂಘನೆ ಸಂಬಂಧ ಪ್ರಕರಣದ ತನಿಖೆ ಸಿಬಿಐನಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 107 ನಿವೇಶನಗಳ ಹಂಚಿಕೆ ಪ್ರಕರಣ ಬಿಟ್ಟು ಉಳಿದವುಗಳ ಹಂಚಿಕೆ, ಈಗಾಗಲೇ ಹಂಚಿಕೆಯಾಗಿರುವ ನಿವೇಶನಗಳಿಗೆ ಪರವಾನಗಿ ವಿತರಿಸಲು ಅನುಮತಿ ನೀಡುವಂತೆ ಮನವಿ ಮಾಡಲು ರಾಜ್ಯಸರ್ಕಾರದ ಮೂಲಕ ಸಿಬಿಐ ಮನವಿ ಪತ್ರ ಬರೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಮುಡಾ ವ್ಯಾಪ್ತಿಗೊಳಪಡುವ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ರವಿಕುಮಾರ್ ಗಣಿಗ, ಎ.ಬಿ.ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಮುಡಾದಿಂದ ಬೆಂಗಳೂರಿಗೆ ನಿಯೋಗ ಕರೆದೊಯ್ದು ಸಿಬಿಐಗೆ ಪತ್ರ ಬರೆಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ವಿವರಿಸಿದರು.

ಕೋಟ್
"

ಭೂಮಿ ಲಭ್ಯತೆ ಇಲ್ಲದ ಕಾರಣ ಮುಡಾದಿಂದ ಎರಡು ದಶಕಗಳಿಂದೀಚೆಗೆ ಬಡಾವಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ 50:50 ಅನುಪಾತದಲ್ಲಿ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಕ್ಕಿಲ್ಲ. ಆದರೀಗ 55:45 ಅನುಪಾತದಲ್ಲಿ ಭೂಮಾಲೀಕರೊಂದಿಗೆ ಬಡಾವಣೆ ರಚಿಸಲು ನಿರ್ಧರಿಸಲಾಗಿದೆ. ಇದು ಯಶಸ್ವಿಯಾದರೆ ಭೂಮಾಲೀಕರಿಗೆ ಅಭಿವೃದ್ಧಿ ಹೊಂದಿದ ನಿವೇಶನದ ಜತೆಗೆ ಆರ್ಥಿಕ ಶಕ್ತಿ ಸಿಗಲಿದೆ.