ಆಲಂಬಾಡಿ ಕಾವಲು ಗ್ರಾಮದಲ್ಲಿರುವ ಅಂಬುಜಾ ಅವರ ತೋಟದಲ್ಲಿ ಅಡಕೆ ನಡುವೆ ವಾಣಿಜ್ಯ ಬೆಳೆಯನ್ನು ಸಮೃದ್ದವಾಗಿ ಬೆಳೆದಿರುವುದು. 
ಮಂಡ್ಯ

ಸಮಗ್ರ ಕೃಷಿಯಲ್ಲಿ ತಾಯಿ ಮಗ ಯಶಸ್ಸು

ಪ್ರಮುಖ ಮುಖ್ಯಾಂಶಗಳು

  • ವಾರ್ಷಿಕವಾಗಿ 10 ಲಕ್ಷ ರೂ., ಆದಾಯ
  • ವಾಣಿಜ್ಯ ಬೆಳೆಗೂ ಆದ್ಯತೆ
ಕೆ.ಆರ್.ಪೇಟೆ: ಶುದ್ಧ ಸಾವಯವ ಕೃಷಿಯನ್ನು ಸಮಗ್ರ ಕೃಷಿ ಪದ್ಧತಿಯಡಿ ವೈಜ್ಞಾನಿಕವಾಗಿ ಅಳವಡಿಸಿಕೊಳ್ಳುವ ಮೂಲಕ ತಾಯಿ, ಮಗ ಸಮೃದ್ಧ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿಕಾವಲು ಗ್ರಾಮದ ತಾಯಿ ಅಂಬುಜಾ, ಮಗ ನವೀನ್ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ತಾಯಿ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು. ನವೀನ್ ಪಿಯುಸಿ ಓದಿದ್ದಾರೆ. ಇವರು ಮೂಲತಃ ಕೃಷಿಕ ಕುಟುಂಬದವರಾಗಿದ್ದರಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದರು. ತಮ್ಮ 9 ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಸಾವಯವ ಕೃಷಿ ಮಾಡುತ್ತಿದ್ದು, ಉಳಿದ 5 ಎಕರೆ ಜಮೀನಿನಲ್ಲೂ ಸಾವಯವ ಕೃಷಿಗೆ ಯೋಜನೆ ರೂಪಿಸಿದ್ದಾರೆ. ಸಂಬಂಧಿಕರ ಸಾವಯವ ಕೃಷಿಯಿಂದ ಪ್ರೇರಪಣೆಗೊಂಡು ಎಂಟು ವರ್ಷದಿಂದ ಸಾವಯವ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. ತಾಯಿ ಕೃಷಿ ಕಾರ್ಯಕ್ಕೆ ಮಗ ಕೈ ಜೋಡಿಸಿದ್ದಾರೆ.
2000 ಅಡಕೆ, 200 ತೆಂಗು, 1300 ಕೋಕೋ, 100 ಬಳ್ಳಿ ಮೆಣಸು ಸೇರಿದಂತೆ ಏಲಕ್ಕಿ, ಬಟರ್ ಫ್ರೂಟ್, ಬೆಟ್ಟದ ನೆಲ್ಲಿ ಗಿಡ, ಕಾಫಿ ಗಿಡ, ಮಾವಿನ ಮರ, ಸಪೋಟ, ಪಪ್ಪಾಯಿ, ವೀಳ್ಯದೆಲೆ, ನಿಂಬೆ ಗಿಡ, ಸೀಪೆ, ಹಿರಳಿ ಗಿಡ, ಅರಣ್ಯ ಬೆಳೆಯನ್ನು ಮಾಡಿದ್ದಾರೆ. ಜಮೀನಿನ ಬದುಗಳಲ್ಲಿ ತೇಗ, ಟೀಕ್, ಮಹಾಘನಿ ಹಲಸು, ಬಿಲ್ವಾರಾ ಮರಗಳಿವೆ.
ವರ್ಷದಲ್ಲಿ ತೆಂಗಿನಿಂದ 1 ಲಕ್ಷ ರೂ., ಅಡಕೆ 4 ಲಕ್ಷ ರೂ., ಕೋಕೋ 3 ಲಕ್ಷ ರೂ., ಇತರೆ ಬೆಳೆಗಳಿಂದ 2 ಲಕ್ಷ ರೂ., ಸೇರಿ ವಾರ್ಷಿಕವಾಗಿ 10 ಲಕ್ಷ ರೂ.ಆದಾಯ ಗಳಿಸುತ್ತಿದ್ದಾರೆ.
ಕೃಷಿಯೊಂದಿಗೆ ಹೈನುಗಾರಿಯನ್ನು ಮಾಡಲಾಗುತ್ತಿದ್ದು, ನಾಲ್ಕು ಹಸು, ಮೂರು ಎಮ್ಮೆ, ನಾಟಿ ಹಸು, 4 ಟಗರುಗಳಿವೆ. ಮನೆ ಬಳಕೆಗೆ ಹಾಲು ಇಟ್ಟುಕೊಂಡು ಉಳಿದಿದ್ದನ್ನು ಡೇರಿಗೆ ಹಾಕಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಇನ್ನು ಜಾನುವಾರುಗಳಿಂದ ಸಂಗ್ರಹವಾಗುವ ಗೊಬ್ಬರವನ್ನು ಜಮೀನಿಗೆ ಬಳಸಲಾಗುತ್ತದೆ. 6+6 ಅಗಲದ ಗುಂಡಿ ತೋಡಿ ಸಗಣಿ, ಬೇವಿನಸೊಪ್ಪು, ಕುರಿಯ ಹಿಕ್ಕೆ ಶೇಖರಿಸಿದಕ್ಕೆ ಗಂಜಲ ಹಾಕಿ ಫಲವತ್ತಾದ ಗೊಬ್ಬರ ಮಾಡಿ ಅದನ್ನು ಟ್ರಾೃಕ್ಟರ್ ಮುಖಾಂತರ ತೋಟಕ್ಕೆ ಹಾಕುತ್ತಿದ್ದಾರೆ.
ತುಂತುರು ನೀರಾವರಿ ಅಳವಡಿಕೆ ಸುಮಾರು 9 ಎಕರೆ ಪ್ರದೇಶದಲ್ಲಿ ಮಿಶ್ರ ಬೇಸಾಯ ಮಾಡಿ ಯಶಸ್ವಿಯಾಗಿರುವ ತಾಯಿ ಮಗ ಬಾಳೆ, ತೆಂಗು, ಅಡಕೆ, ಕೋಕೋ, ಮೆಣಸು, ವೀಳ್ಯದೆಲೆ, ಏಲಕ್ಕಿ, ಪಪ್ಪಾಯಿ, ನಿಂಬೆ, ಹಲಸು, ತೇಗ ಹಾಗೂ ತೋಟದ ಅಂಚಿನಲ್ಲಿ ಸಿಲ್ವರ್ ಮರಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ 15 ಬಗೆಯ ಹಣ್ಣಿನ ಗಿಡಗಳೂ ಇವೆ. ಎರಡು ಎಕರೆಯಲ್ಲಿ ಏಲಕ್ಕಿ ಬಾಳೆ ಗಿಡಗಳನ್ನು ನಾಟಿ ಮಾಡಲಾಗಿದೆ. ಮಳೆ ಗಾಳಿಗೆ ಬಾಳೆ ಬೆಳೆ ಹಾನಿಯಾಗದಂತೆ ಪ್ಲಾಸ್ಟಿಕ್ ಹಗ್ಗ ಕಟ್ಟಿದ್ದಾರೆ. ಬಾಳೆ ಗಿಡದ ಬದಿಯಲ್ಲಿ ಮೆಣಸಿನ ಗಿಡಗಳಿವೆ. ಬಾಳೆ ಹಾಕುವ ಪೂರ್ವದಲ್ಲಿ ಜಮೀನನ್ನು ಹದಮಾಡಿ ದನ ಮತ್ತು ಕುರಿ ಗೊಬ್ಬರ ಹಾಕಿ ಹದ ಮಾಡಿರುವುದು ವಿಶೇಷ. ಇನ್ನು ನೀರು ಪೂರೈಕೆಗಾಗಿ ಕೊಳವೆ ಬಾವಿ ಆಶ್ರಯಿಸಲಾಗಿದ್ದು, ತುಂತುರು ನೀರಾವರಿ ಮಾಡಲಾಗಿದೆ. ತೋಟ ನಿರ್ವಹಣೆಗೆ ಒಂಬತ್ತು ಕೊಳವೆ ಬಾವಿಗಳಿವೆ. ನೀರಿಗೆ ತಾತ್ವರವಿಲ್ಲ. ಎಂತಹ ಬೇಸಿಗೆಯಲ್ಲೂ ತೋಟಕ್ಕೆ ನೀರುಣಿಸಲು ಸಮಸ್ಯೆ ಆಗುವುದಿಲ್ಲ.
ತೋಟಕ್ಕೆ ಜೀವಾಮೃತ ಪೂರೈಕೆ ತೋಟಕ್ಕೆ ಜೀವಾಮೃತವನ್ನು ತಯಾರಿಸಿ ಪೂರೈಸುತ್ತಾರೆ. ದ್ವಿದಳ ದಾನ್ಯದ ಹಿಟ್ಟು, ಬೆಲ್ಲ, ನಾಟಿ ಹಸುವಿನ ಸಗಣಿ, ನೀರು ಬೇಕಾಗುತ್ತದೆ. ನೀರಿಗೆ ಎಲ್ಲ ಪದಾರ್ಥಗಳನ್ನು ಸೇರಿಸಿ ವಾರದ ತನಕ ಬಿಡಬೇಕು. ಪ್ರತಿದಿನ ಎರಡು ಬಾರಿ ಎಡದಿಂದ ಬಲಕ್ಕೆ ತಿರಗಿಸಬೇಕು. ಜೀವಾಮೃತ ತಯಾರಾದ ಮೇಲೆ ಹನಿ ನೀರವಾರಿ ಮೂಲಕ ತೋಟಕ್ಕೆ ಪೂರೈಸಬೇಕು. ಜೀವಾಮೃತದಿಂದ ತೋಟದ ಫಲವತ್ತತೆ ಹೆಚ್ಚಾಗಲಿದೆ. ಬೆಳೆಗೆ ಅಗತ್ಯ ಪೋಷಕಾಂಶಗಳು ಪೂರೈಕೆ ಆಗುತ್ತದೆ. ಬೆಳೆಗೆ ದನ, ಕುರಿ ಗೊಬ್ಬರವನ್ನು ವರ್ಷಕ್ಕೆ ಎರಡು ಬಾರಿ ಪೂರೈಸುತ್ತೇವೆ. ರಾಸಾಯನಿಕ ಗೊಬ್ಬರವನ್ನು ತೋಟಕ್ಕೆ ಬಳಸುವುದಿಲ್ಲ ಎಂದು ರೈತ ನವೀನ್ ಹೇಳಿದ್ದಾರೆ.