ಮಂಡ್ಯ ತಾಲೂಕು ವಿ.ಸಿ ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಮುಂಗಾರು ತಾಂತ್ರಿಕ ಆಂದೋಲನದಲ್ಲಿ ರೈತರು ಮತ್ತು ರೈತ ಮಹಿಳೆಯರು ಮಾಹಿತಿ ಪಡೆದರು.
- ವಿ.ಸಿ ಫಾರಂನಲ್ಲಿ ಮುಂಗಾರು ತಾಂತ್ರಿಕ ಆಂದೋಲನ
- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ(ಕೆ.ವಿ.ಕೆ), ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜನೆ
ಮಂಡ್ಯ: ಮುಂಗಾರು ಹಂಗಾಮು ರೈತರಿಗೆ ಅತ್ಯಂತ ಮಹತ್ವದ ಅವಧಿ. ಈ ಹಿನ್ನೆಲೆಯಲ್ಲಿ ಹವಾಮಾನ ವೈಪರೀತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತ ಸಿದ್ಧತೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್ ಸಲಹೆ ನೀಡಿದರು.
ತಾಲೂಕಿನ ವಿ.ಸಿ ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ(ಕೆ.ವಿ.ಕೆ), ವಲಯ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಮುಂಗಾರು ತಾಂತ್ರಿಕ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿರುವ ತಾಂತ್ರಿಕತೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಬಿತ್ತನೆ ಬೀಜಗಳು, ಕೃಷಿ ಪರಿಕರಗಳು, ಯಂತ್ರೋಪಕರಣಗಳು ಹಾಗೂ ವಿವಿಧ ಯೋಜನೆಗಳ ಸೌಲಭ್ಯಗಳು ಎಲ್ಲಿ ದೊರೆಯುತ್ತವೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ಮೂಲಕ ವೈಜ್ಞಾನಿಕ ಕೃಷಿಯತ್ತ ಹೆಜ್ಜೆ ಇಡಬೇಕು. ಇದರಿಂದಾಗಿ ಕೃಷಿಯಲ್ಲಿ ಆರ್ಥಿಕ ಲಾಭ ಕಾಣಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಪ್ರಸಕ್ತ ಹವಾಮಾನ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ಬಳಕೆ, ಮಳೆ ನೀರು ಸಂರಕ್ಷಣೆ, ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಅನುಸರಿಸುವುದು ಮುಖ್ಯ. ಇದರಿಂದಾಗಿ ರೈತರು ಸಂಭವನೀಯ ನಷ್ಟದಿಂದ ರಕ್ಷಣೆ ಪಡೆಯಬಹುದು. ಮುಖ್ಯವಾಗಿ ಕೃಷಿಯನ್ನು ಕೇವಲ ಜೀವನೋಪಾಯವಾಗಿ ನೋಡದೆ, ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರ ಮಾತನಾಡಿ, ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಅಂತೆಯೇ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಲಾಭವನ್ನು ಹೆಚ್ಚಿಸಿಕೊಳ್ಳಬೇಕು. ಗುಣಮಟ್ಟದ ಬೀಜಗಳ ಬಳಕೆ, ಜೈವಿಕ ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲನ ಬಳಕೆ, ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಹೇಳಿದರು.
ಬಹುಮುಖ್ಯವಾಗಿ ರೈತರು ತಮ್ಮ ಪ್ರದೇಶಕ್ಕೆ ಸೂಕ್ತವಾದ ಬೆಳೆ ಮತ್ತು ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಬಿತ್ತನೆ ಬೀಜಗಳನ್ನು ಅಧಿಕೃತ ಮೂಲಗಳಿಂದ ಪಡೆದು ಶಿಫಾರಸು ಮಾಡಿದ ಅವಧಿಯೊಳಗೆ ಬಿತ್ತನೆ ಮಾಡಲು ಗಮನಹರಿಸಬೇಕು. ಅಂತೆಯೇ ಭೂಮಿ ಪರೀಕ್ಷೆ ನಡೆಸಿ ಮಣ್ಣಿನ ಆರೋಗ್ಯಕ್ಕೆ ಅನುಗುಣವಾಗಿ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.
ರೈತರು ಮಾರುಕಟ್ಟೆ ಬೇಡಿಕೆಯನ್ನು ಅರಿತು ಬೆಳೆ ಯೋಜನೆ ರೂಪಿಸಬೇಕು. ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆಗಳ ಮೂಲಕ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದ ಅವರು, ಸಮಗ್ರ ಕೃಷಿ ಪದ್ಧತಿ, ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಸೇರಿದಂತೆ ಉಪಕಸುಬುಗಳನ್ನು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ವರ್ಷ ಪೂರ್ತಿ ನಿರಂತರ ಆದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎಂದು ತಿಳಿಸಿದರು.
ಅದೇ ರೀತಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯ ಬಗ್ಗೆಯೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತರು ನಿಖರ ಕೃಷಿ, ಕೃತಕ ಬುದ್ಧಿಮತ್ತೆ, ಡ್ರೋನ್ ತಂತ್ರಜ್ಞಾನ, ಮೊಬೈಲ್ ಆಧಾರಿತ ಕೃಷಿ ಸಲಹೆಗಳು ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಮಾಹಿತಿ ಪಡೆದು ಅವುಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.
ಕೆ.ವಿ.ಕೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆ ಡಾ.ಕಮಲಾಬಾಯಿ ಕೊಡಗಿ, ಕೃಷಿ ವಿಸ್ತರಣೆ ವಿಜ್ಞಾನಿ ಡಾ.ಡಿ.ಕೆ.ಸುರೇಶ್, ಮಣ್ಣು ವಿಜ್ಞಾನದ ವಿಜ್ಞಾನಿ ಡಾ. ಅತೀಫಾ ಮುನಾವರಿ, ತೋಟಗಾರಿಕೆ ವಿಜ್ಞಾನಿ ಡಾ.ಬಿ.ದಿವ್ಯಾ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಆರ್.ದರ್ಶನ್, ಬೇಸಾಯಶಾಸ್ತ್ರದ ವಿಜ್ಞಾನಿ ಡಾ.ಎಂ.ಭವ್ಯಾ, ಬಿತ್ತನೆ ಬೀಜ ಘಟಕದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಾರೂಡ ಸಿಂಗಾಡಿ ಅವರು ವಿವಿಧ ಕೃಷಿ ವಿಷಯಗಳ ಕುರಿತು ರೈತರಿಗೆ ಮಾರ್ಗದರ್ಶನ ನೀಡಿದರು.
ನಂತರ ನಡೆದ ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮುಂಗಾರು ಹಂಗಾಮಿನ ಬೆಳೆ ನಿರ್ವಹಣೆ, ಬಿತ್ತನೆ ಬೀಜ ಆಯ್ಕೆ, ಕೀಟ ಹಾಗೂ ರೋಗ ನಿರ್ವಹಣೆ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ಸಮಸ್ಯೆಗಳು ಮತ್ತು ಸರ್ಕಾರಿ ಯೋಜನೆಗಳ ಕುರಿತು ತಮ್ಮ ಪ್ರಶ್ನೆಗಳನ್ನು ಕೇಳಿ ವಿಜ್ಞಾನಿಗಳಿಂದ ಸೂಕ್ತ ಸಲಹೆ ಪಡೆದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ರೈತರು ಮತ್ತು ರೈತ ಮಹಿಳೆಯರು ಪಾಲ್ಗೊಂಡರು. ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.