ಕೃಷ್ಣರಾಜಸಾಗರ ಪದವಿಪೂರ್ವ ಕಾಲೇಜಿನಲ್ಲಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಿಶೋರ-ಕೀರ್ತನ-ಸಂಕೀರ್ತನ ಕಾರ್ಯಕ್ರಮಕ್ಕೆ ಡಾ.ಜಯಪ್ರಕಾಶ ಗೌಡ ತಬಲ ಬಡಿಯುವುದರ ಮೂಲಕ ಚಾಲನೆ ನೀಡಿದರು. ಡಾ.ಅಬ್ದುಲ್ ಖಾದಿರ್, ಲಿಂಗರಾಜು, ಎಂ.ಬಿ.ಕುಮಾರ್, ಶುಭಾಧನಂಜಯ, ಡಿ.ದೇವರಾಜ್ ಇದ್ದರು. 
ಮಂಡ್ಯ

ಮೊಬೈಲ್ ಬಳಕೆಯಿಂದ ಕೀರ್ತನೆಗಳ ಕಲಿಕೆ ನಾಶ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ ಗೌಡ ಕಳವಳ
  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಆಯೋಜನೆ
ಕೆ.ಆರ್.ಸಾಗರ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಕೃಷ್ಣರಾಜಸಾಗರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಕಿಶೋರ ಕೀರ್ತನ ಸಂಕೀರ್ತನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ ಗೌಡ ತಬಲ ಬಡಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಸ್ತುತ ದಿನಗಳಲ್ಲಿ ಕೀರ್ತನೆಗಳ ಕಲಿಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ತಮಗೆ ಸಿಗುವ ಕಾಲದಲ್ಲಿಯೇ ವಿದ್ಯಾಭ್ಯಾಸದ ಜತೆಗೆ ಕೀರ್ತನೆಗಳನ್ನು ಕಲಿತು ಉಳಿಸಬೇಕಾಗಿದೆ. ಇದಕ್ಕೆ ಪ್ರೋತ್ಸಾಹ ಅಗತ್ಯವಾಗಿದೆ. ಯುವ ಜನತೆ ಎಲ್ಲವನ್ನೂ ಮೊಬೈಲ್‌ನಲ್ಲಿ ಹುಡುಕಾಟ ಮಾಡಿ ಅದರಲ್ಲಿ ಅಧ್ಯಯನ ಮಾಡುತ್ತಿರುವುದರಿಂದ ಕೀರ್ತನೆಗಳ ಕಲಿಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಕಾಲೇಜುಗಳಲ್ಲಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಾಡಿರುವುದು ಸಂತೋಷದ ವಿಷಯ ಎಂದರು.
ಮತ್ತೊಬ್ಬ ಅತಿಥಿ ಡಾ.ಅಬ್ದುಲ್ ಖಾದಿರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಅಗತ್ಯವಾಗಿದ್ದು, ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಸಂಗೀತ ಮನಸ್ಸಿಗೆ ಉತ್ತಮ ಅರೋಗ್ಯ ಕೊಡುವ ಕಲೆಯಾಗಿದೆ, ಇಂದಿನ ದಿನಗಳಲ್ಲಿ ಸಂಗೀತ ಕಲಿಕೆ ಕಡಿಮೆಯಾಗುತ್ತಿದೆ. ಯುವ ಜನತೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಇದಕ್ಕೆ ಕಾರಣ. ಸೋಷಿಯಲ್ ಮೀಡಿಯಾ ಹಾವಳಿ ಹೆಚ್ಚಾಗಿದ್ದು, ಮೊಬೈಲ್ ಫೋನೇ ಜೀವನವಾಗಿದೆ. ಇದರಿಂದ ಪ್ರಾಚೀನ ಕಲೆಗಳು ಮೊಬೈಲ್‌ನ ಹೊಡೆತಕ್ಕೆ ನಶಿಸತೊಡಗಿದೆ ಎಂದರು.
ಕಿಶೋರ-ಕೀರ್ತನ-ಸಂಕೀರ್ತನ ಕಾರ್ಯಕ್ರಮದ ಅಂಗವಾಗಿ ಕೀರ್ತನ ಕೀಶೋರಿ, ವಿಸ್ಮಯ ಸುಮಾರು ಒಂದು ತಾಸು ಕನಕದಾಸರ ಕೀರ್ತನೆಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕೀರ್ತನೆ ಬಗ್ಗೆ ಆಸಕ್ತಿ ಮೂಡಿಸಿದರು.
ಕಾಲೇಜು ಪ್ರಾಂಶುಪಾಲ ಲಿಂಗರಾಜು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ.ಕುಮಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಶುಭಾಧನಂಜಯ, ಸದಸ್ಯ ಸಂಚಾಲಕ ಡಿ.ದೇವರಾಜ್, ರಿಜಿಸ್ಟ್ರಾರ್ ಎನ್.ನರೇಂದ್ರಬಾಬು, ಸದಸ್ಯ ಡಿ.ಆರ್. ರಾಜಪ್ಪ ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಯೋಗರಾಜ್, ಚಂದ್ರು, ಕುಮಾರ್ ಸೇರಿದಂತೆ ಇತರರು ಇದ್ದರು.