ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಂ.ಎಂ ಫೌಂಡೇಷನ್ ಟ್ರಸ್ಟಿ ಎಂ.ಎನ್.ರವಿ ಮಾತನಾಡಿದರು.
- ಜಿಲ್ಲೆಯ ಜನರಿಗಾಗಿ ‘ಉಚಿತ ಔಷಧ ನೆರವು’
- ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ
ಮಂಡ್ಯ: ಸಾಮಾಜಿಕ ಹಾಗೂ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಎಂ.ಎಂ ಫೌಂಡೇಷನ್‌ನಿಂದ ಜಿಲ್ಲೆಯ ಜನರಿಗಾಗಿ ‘ಉಚಿತ ಔಷಧ ನೆರವು’ ಹಾಗೂ ಬೀದಿ ನಾಟಕಗಳ ಮೂಲಕ ರಸ್ತೆ ಅಪಘಾತಗಳ ತಡೆ ಮತ್ತು ಜಾಗೃತಿ ಅಭಿಯಾನ ಆಯೋಜಿಸಲಾಗುತ್ತಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಎಂ.ಎನ್.ರವಿ ತಿಳಿಸಿದರು.
ಫೌಂಡೇಷನ್‌ನಿಂದ ನಿರಂತರ ಜನಪರ ಕಾರ್ಯಕ್ರಮ ಮಾಡಲಾಗುತ್ತಿದೆ. ಅಂತೆಯೇ ಸಾಮಾಜಿಕ ಜವಾಬ್ದಾರಿಯಿಂದ ಔಷಧ ವಿತರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರ್ಥಿಕ ಸಮಸ್ಯೆಯಿಂದಾಗಿ ಉಚಿತ/ರಿಯಾಯಿತಿ ದರದಲ್ಲಿ ಚಿಕಿತ್ಸೆ ಮತ್ತು ಆರ್ಥಿಕವಾಗಿ ಹಿಂದುಳಿದ, ಹಿರಿಯ ನಾಗರಿಕ ಮತ್ತು ಅಂಗವಿಕಲರು, ಔಷಧ ಪಡೆಯಲು ಸಾಧ್ಯವಾಗದ ಕಾಯಿಲೆ ಪೀಡಿತರಿಗೆ ಈ ಯೋಜನೆಯಡಿ ಉಚಿತ ಔಷಧ ನೀಡಲಾಗುತ್ತದೆ. ಬಿಪಿ, ಶುಗರ್, ಥೈರಾಯ್ಡ, ಮಿದುಳು, ಮಾನಸಿಕ, ಪಾರ್ಶ್ವವಾಯು ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧ ಪಡೆಯುತ್ತಿರುವವರು ವೈದ್ಯರ ಸಲಹಾ ಚೀಟಿ ಮತ್ತು ಆರ್ಥಿಕ ಸಂಕಷ್ಟದ ವಿವರದೊಂದಿಗೆ ಅರ್ಜಿ ಸಲ್ಲಿಸಿ ಉಚಿತ ಔಷಧ ನೆರವು ಪಡೆಯಲು ಹೇಳಿದರು.
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ’ರಸ್ತೆ ಸುರಕ್ಷತಾ ಜಾಗೃತಿ ಬೀದಿ ನಾಟಕ ಅಭಿಯಾನ’ ಆಯೋಜಿಸಲಾಗಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಹೆಲ್ಮೆಟ್ ಧರಿಸುವುದು, ಅತಿವೇಗ ಚಾಲನೆ ತಡೆಯುವುದು, ಸೀಟ್ ಬೆಲ್ಟ್ ಬಳಕೆ ಮತ್ತು ಚಾಲನೆ ವೇಳೆ ಮೊಬೈಲ್ ಬಳಸದಿರುವ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ವಿವರಿಸಿದರು.
ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿಗಳಾದ ಎಂ.ಸಿ.ಅಮಿತ್‌ಗೌಡ, ವಿಶ್ವ, ಸದಸ್ಯೆ ಶೋಭಾ ಇದ್ದರು.