ಮಳವಳ್ಳಿ ತಾಲೂಕಿನ ಬೆಳಕವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿರುವುದು. 
ಮಂಡ್ಯ

ಹೆದ್ದಾರಿಯಲ್ಲಿ ಕಾರುಗಳು ಮುಖಾಮುಖಿ ಡಿಕ್ಕಿ

ಎ. ಆರ್. ರಘುರಾಮ
ಮಳವಳ್ಳಿ : ತಾಲೂಕಿನ ಹೊಸಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐದು ಜನರು ಗಾಯಗೊಂಡಿದ್ದಾರೆ.
ಎರಡೂ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಬೆಂಗಳೂರು ಮೂಲದವರಾಗಿದ್ದು, ಹೇಮಾಲಿ(42) ಮತ್ತು ವೀಣಾ(51) ಎಂಬುವರಿಗೆ ತಲೆಯ ಭಾಗಕ್ಕೆ ತೀವ್ರತರಹದ ಪೆಟ್ಟಾಗಿ ಗಂಭೀರ ಸ್ಥೀತಿಯಲ್ಲಿದ್ದಾರೆ. ಜಯರಾಮು ಎಂಬುವರಿಗೆ ಕಾಲು ಮುರಿದಿದೆ. ತೇಜಶ್ವಿನಿ ಹಾಗೂ ಮಾರುತ ಚಲಯ್ಯ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೊಳ್ಳೇಗಾಲ ಕಡೆಯಿಂದ ಬರುತ್ತಿದ್ದ ಕಾರೊಂದು ಮತ್ತೊಂದು ವಾಹನವನ್ನು ಹಿಂದಿಕ್ಕಲು ಮುಂದಾದ ವೇಳೆ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಕ್ಷಣಾ ತಂಡ ಆಗಮಿಸಿ ಎರಡು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ. ಜಖಂಗೊಂಡಿದ್ದ ಕಾರುಗಳನ್ನು ಕ್ರೇನ್ ಯಂತ್ರದ ಮೂಲಕ ರಸ್ತೆ ಬದಿಗೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.