- ಕಾಂಗ್ರೆಸ್‌ಗೆ ನಿಯತ್ತಿನಿಂದ ಇರುವ ವ್ಯಕ್ತಿ ಡಿಕೆಶಿ
- ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ
- ಹೈಕಮಾಂಡ್ ಇದನ್ನು ಇತ್ಯರ್ಥ ಮಾಡಲೇಬೇಕು
ಮಂಡ್ಯ: ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರ ಸಮಯ ಕೊಡಿ, ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ತಾಲೂಕಿನ ಹಳೆಬೂದನೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯತ್ತು ಎಂದರೆ ಅದು ಡಿ.ಕೆ.ಶಿವಕುಮಾರ್. ಕಾಂಗ್ರೆಸ್ ಪಕ್ಷಕ್ಕೆ ಅವರ ನಿಯತ್ತು. ಕಳೆದ 40 ವರ್ಷದಿಂದ ಹೈಕಮಾಂಡ್‌ಗೆ ನಿಯತ್ತಿನಿಂದ ಇರುವ ಮನುಷ್ಯ ಡಿ.ಕೆ. ಶಿವಕುಮಾರ್. 2013ರಲ್ಲಿ 6 ತಿಂಗಳು ಮಂತ್ರಿ ಮಾಡಲಿಲ್ಲ. ಆಗಲೂ ಬೇಸರ ಮಾಡಿಕೊಂಡಿಲ್ಲ. ಈಗ ಸಿಎಂ ಆಗಿಲ್ಲ. ಆದರೂ ಬೇಸರ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ನಿಯತ್ತು. ಬಹುಶಃ ಈ ಕಾರಣಕ್ಕೆ ಸಚಿವ ಎಚ್.ಸಿ.ಮಹದೇವಪ್ಪ ಆ ರೀತಿ ಹೇಳಿರಬೇಕು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ ರವಿಕುಮಾರ್ ಗಣಿಗ, ನಾಯಿ ಮತ್ತು ವ್ಯಂಗ್ಯ, ಎಲ್ಲದಕ್ಕೂ ಮುಂದೆ ಸೂಕ್ತ ಉತ್ತರ ಸಿಗಲಿದೆ. ಸಿಎಂ ಸೇರಿದಂತೆ 136 ಶಾಸಕರು ಡಿ.ಕೆ.ಶಿವಕುಮಾರ್ ಅವರ ಆಪ್ತರೆ ಆಗಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ಬಗ್ಗೆ ಮಾತನಾಡಿದ ಶಾಸಕ ಪಿ.ರವಿಕುಮಾರ್ ಗಣಿಗ, ಯಾರಾದರೂ ಸ್ಪಾನ್ಸರ್ ಮಾಡಿರಲಿ. ಅಥವಾ ಕದ್ದು ವಿದೇಶಕ್ಕೆ ಹೋಗಿರಲಿ. ಅಲ್ಲಿ ಕುಳಿತ ಮಾತ್ರಕ್ಕೆ ಸಿಎಂ ಬದಲಾಗಲ್ಲ. ಸರ್ಕಾರ ಕೂಡ ಬದಲಾಯಿಸಲು ಆಗಲ್ಲ. ಏನಿದ್ದರೂ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ತೀರ್ಮಾನ ಮಾಡಬೇಕು. ಗಣಿಗ ರವಿಕುಮಾರ್ 50 ಜನ ಶಾಸಕರನ್ನು ಕರೆದುಕೊಂಡು ಹೋದ ಮಾತ್ರಕ್ಕೆ ಬದಲಾವಣೆ ಮಾಡಕ್ಕಾಗಲ್ಲ. ಹೈಕಮಾಂಡ್ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಆದರೆ ಎಲ್ಲಿಯರೆಗೂ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿ ಪೂರ್ಣ ವಿರಾಮ ಇಡುವುದಿಲ್ಲವೋ ಅಲ್ಲಿಯವರೆಗೂ ಇದು ಚರ್ಚೆ ಆಗುತ್ತಲೇ ಇರುತ್ತದೆ. ಇದು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗುತ್ತದೆ. ಸುಮ್ಮನೆ ಕಾಲಹರಣ ಮಾಡುವ ರೀತಿ ನಡೆಸಿಕೊಂಡರೆ ಆಗುವುದಿಲ್ಲ. ಏನಾದರೂ ಒಂದು ನಿರ್ಧಾರ ಮಾಡಬೇಕು. ದಿನಕ್ಕೆ ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುವುದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡುತ್ತೇವೆ ಅಥವಾ ಇಲ್ಲ ಎಂತಾದರೂ ಹೈಕಮಾಂಡ್ ಹೇಳಬೇಕು. ಇಲ್ಲದಿದ್ದರೆ ಇದೆ ರೀತಿ ಪ್ರವಾಸ, ರೆಸಾರ್ಟ್‌ಗೆ ಹೋಗುತ್ತಿರುತ್ತಾರೆ. ಮಧ್ಯ ಪ್ರವೇಶಿಸದಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ಹೈಕಮಾಂಡ್ ಇದನ್ನು ಇತ್ಯರ್ಥ ಮಾಡಲೇಬೇಕು ಎಂದು ಒತ್ತಾಯಿಸಿದರು.