ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿದರು.
- ಬಾಯ್ಲಿಂಗ್ ಹೌಸ್‌ಗೆ 60 ಕೋಟಿ ರೂ ಅನುದಾನ ಘೋಷಣೆ
- ಶೀಘ್ರವೇ ಕಾಮಗಾರಿ ಆರಂಭ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಖಾ ನಾಲೆಗಳ ಆಧುನೀಕರಣಕ್ಕೆ ರಾಜ್ಯಸರ್ಕಾರ 100 ಕೋಟಿ ರೂ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರಗೋಡು ಹೋಬಳಿಯ ಶಿಂಷಾ ಹಾಗೂ ಹೊಸ ಮದ್ದೂರು ಫಿಕಪ್ ನಾಲೆಗಳನ್ನು ಈ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಲಾಗುವುದು. ಇದು ರೈತರ ಬಹಳ ದಿನದ ಬೇಡಿಕೆಯಾಗಿತ್ತು. ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಈಗಾಗಲೇ ಕ್ಷೇತ್ರದಲ್ಲಿ 200 ಕೋಟಿ ರೂ ವೆಚ್ಚದಲ್ಲಿ ವಿಶ್ವೇಶ್ವರಯ್ಯ ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ಶೇ.80ರಷ್ಟು ಪೂರ್ಣಗೊಂಡಿದೆ. ನಾಲೆಗಳ ಅಭಿವೃದ್ಧಿಯಿಂದ ರೈತರಿಗೆ ದೊಡ್ಡಮಟ್ಟದ ಅನುಕೂಲವಾಗುತ್ತಿದೆ. ಹಿಂದೆಲ್ಲ ಕೆಆರ್‌ಎಸ್ ಡ್ಯಾಂನಿಂದ ನೀರು ಬಿಟ್ಟರೆ ಮಂಡ್ಯ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಬರುವ ಹೊತ್ತಿಗೆ ಮೂರ‌್ನಾಲ್ಕು ದಿನ ಬೇಕಿತ್ತು. ಆದರೀಗ ಕೇವಲ 24 ಗಂಟೆಯಲ್ಲಿ ಹರಿದು ಬರುತ್ತದೆ. ಇದು ನಮ್ಮ ಸರ್ಕಾರ ರೈತರಿಗಾಗಿ ಮಾಡಿದ ವಿಶೇಷ ಯೋಜನೆ. ಇದಲ್ಲದೆ ಬಸರಾಳು ಭಾಗದಲ್ಲಿ ಹೇಮಾವತಿ ನಾಲೆ ಆಧುನೀಕರಣಕ್ಕೂ 350 ಕೋಟಿ ರೂ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಡಿಪಿಆರ್ ಸಿದ್ಧಪಡಿಸಲಾಗಿದೆ. ತಾಂತ್ರಿಕ ಸಮಿತಿ ಅನುಮೋದನೆ ನೀಡಿದ ಬಳಿಕ ಕ್ಯಾಬಿನೆಟ್ ಮುಂದಿಡಲಾಗುವುದು. ಅಲ್ಲಿ ಅನುಮೋದನೆಯಾಗಬೇಕು ಎಂದು ವಿವರಿಸಿದರು.
ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಎಲ್.ಕೃಷ್ಣ ಇದ್ದರು.
60 ಕೋಟಿ ರೂ ವೆಚ್ಚದಲ್ಲಿ ಬಾಯ್ಲಿಂಗ್ ಹೌಸ್
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಮೈಶುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಈಗಾಗಲೇ 200 ಕೋಟಿ ರೂ ಅನುದಾನ ನೀಡಿದೆ. ಕಳೆದ ವಾರದ ಸಚಿವ ಸಂಪುಟ ಸಭೆಯಲ್ಲಿ ಬಾಯ್ಲಿಂಗ್ ಹೌಸ್‌ಗೆ 60 ಕೋಟಿ ರೂ ಅನುದಾನ ಘೋಷಣೆ ಮಾಡಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಹೊಸ ಕಾರ್ಖಾನೆ ಮಾಡುವುದಾಗಿ ತೀರ್ಮಾನ ಮಾಡಲಾಗಿತ್ತು. ಆದರೆ ಅದಕ್ಕೆ ಸಾಕಷ್ಟು ನಿಯಮಗಳಿವೆ. ಅದರ ಬದಲು ಈಗಿನ ಕಾರ್ಖಾನೆಯನ್ನೇ ಅಭಿವೃದ್ಧಿಪಡಿಸಬಹುದೆಂದು ತಜ್ಞರ ತಂಡ ಸಲಹೆ ನೀಡಿದೆ. ಅದರಂತೆ ಬಾಯ್ಲರ್ ಹೌಸ್ ಮಾಡಲಾಗುತ್ತಿದೆ. ಇದರಿಂದ ಕಬ್ಬಿನ ಅರೆಯುವಿಕೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬಹುದು. ಇನ್ನು ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದರು.
ಇದಲ್ಲದೆ 33 ಕೋಟಿ ರೂ ವೆಚ್ಚದಲ್ಲಿ ಶ್ರಮಿಕ ವಸತಿ ಶಾಲೆ ಪ್ರಾರಂಭಕ್ಕೆ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿದೆ. ಅಂತೆಯೇ 35 ಕೋಟಿ ರೂ ವೆಚ್ಚದಲ್ಲಿ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಶಾಲೆ ಪ್ರಾರಂಭಿಸಲಾಗುತ್ತಿದ್ದು, ಇದಕ್ಕಾಗಿ 5 ಎಕರೆ ಜಮೀನು ಕೇಳಿದ್ದಾರೆ. ಬಿ.ಹೊಸೂರು ಕಾಲನಿಯಲ್ಲಿ ಎರಡು ಎಕರೆ ಸಿದ್ಧವಿದ್ದು, ಉಳಿದ ಜಾಗಕ್ಕೆ ಡಿಸಿ ಅವರ ಬಳಿ ಮನವಿ ಮಾಡಲಾಗಿದೆ. ಬಿ.ಹೊಸೂರು ಕಾಲನಿಯಲ್ಲಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದಕ್ಕಾಗಿ 6 ಕೋಟಿ ರೂ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಫುಟ್‌ಪಾತ್, ಸೈಕಲ್‌ಬೇ ಗೆ ಅನುದಾನ
ಮಹಾನಗರ ಪಾಲಿಕೆಗಷ್ಟೇ ಸೀಮಿತವಾಗಿರುವ ವಿಶೇಷ ಕಾರ್ಯಕ್ರಮವನ್ನು ಮಂಡ್ಯ ನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಡೆಲ್ಟಾ ಅನುಮತಿಯೊಂದಿಗೆ ನಗರದ ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದಿಂದ ಗೌರಿಶಂಕರ ಕಲ್ಯಾಣಮಂಟಪದವರೆಗೆ ಫುಟ್‌ಪಾತ್ ಹಾಗೂ ಸೈಕಲ್‌ಬೇ ನಿರ್ಮಾಣ ಮಾಡಲು 6.50 ಕೋಟಿ ರೂ ಅನುದಾನ ನೀಡಿದೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.
ಹೊಸಹಳ್ಳಿ ವೃತ್ತವನ್ನು 1.50 ಕೋಟಿ ರೂ ವೆಚ್ಚದಲ್ಲಿ ವಿದೇಶ ಮಾದರಿ ಅಭಿವೃದ್ಧಿಪಡಿಸಲಾಗುವುದು. ಕನ್ನಿಕಾಪರಮೇಶ್ವರಿ ದೇವಸ್ಥಾನದ ಎದುರಿನ ವೃತ್ತವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗಿದ್ದು, ಈ ವಾರ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ವಿ.ವಿ ರಸ್ತೆಯನ್ನು ವಾಹನ ಮುಕ್ತಗೊಳಿಸಲು ಯೋಜನೆ ರೂಪಿಸಲಾಗಿದೆ. ನಗರದ 23 ವಾರ್ಡ್‌ಗೆ ಕಾವೇರಿ ಕುಡಿಯುವ ನೀರನ್ನೊದಗಿಸಲು ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಚ್‌ಡಿಕೆ ಗೊಂದಲದಲ್ಲಿದ್ದಾರೆ
ಕೈಗಾರಿಕೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ನೂರು ಎಕರೆ ಜಮೀನು ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಮಂಡ್ಯ ಕ್ಷೇತ್ರದಲ್ಲಿ ಎರಡು, ನಾಗಮಂಗಲ ಹಾಗೂ ಶ್ರೀರಂಗಪಟ್ಟಣದಲ್ಲಿ ತಲಾ ಒಂದು ಜಾಗದ ಮಾಹಿತಿ ನೀಡಲಾಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ತಂಡ ಯಾವ ಜಾಗ ಸೂಕ್ತವೆಂದು ತಿಳಿಸಿದರೆ ಅದನ್ನು ಸಿದ್ಧಪಡಿಸಿ ಕೆಐಎಡಿಬಿ ಮೂಲಕ ಹಸ್ತಾಂತರಿಸಲಾಗುವುದು ಎಂದು ರವಿಕುಮಾರ್ ಗಣಿಗ ಹೇಳಿದರು.
ಕೈಗಾರಿಕೆ ಸ್ಥಾಪನೆ ವಿಚಾರದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೊಂದಲದಲ್ಲಿದ್ದಾರೆ. ರಾಜ್ಯಸರ್ಕಾರ ಇಲ್ಲಿ ಜಾಗ ಕೊಟ್ಟಿಲ್ಲ ಎನ್ನುತ್ತಾರೆ, ಅದೇ ಬಿಡದಿಯಲ್ಲಿ ರೈತರ ಜಾಗ ಕೊಡುವುದಿಲ್ಲವೆಂದು ಹೇಳುತ್ತಾರೆ. ಇದ್ಯಾವ ರೀತಿ ಎನ್ನುವುದು ತಿಳಿಯುತ್ತಿಲ್ಲ. ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ನಗರದ ಕಲ್ಲಹಳ್ಳಿ ಬಳಿ ಒಂದು ಎಕರೆ ಜಾಗವನ್ನು ದಿಶಾ ಸಮಿತಿ ಸಭೆಯಲ್ಲಿಯೇ ಘೋಷಣೆ ಮಾಡಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಸೂಚನೆ ನೀಡಿದ್ದೆ. ಆದರೆ ನಮಗೆ ಜಾಗವನ್ನೇ ನೀಡಲಿಲ್ಲವೆಂದು ಎಚ್‌ಡಿಕೆ ಆರೋಪ ಮಾಡಿದ್ದರು ಎಂದರು.