ಮಂಡ್ಯ ನಗರದ ಕೆಇಬಿ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕ ಪಿ.ರವಿಕುಮಾರ್ ಗಣಿಗ ಭೂಮಿಪೂಜೆ ನೆರವೇರಿಸಿದರು.  
ಮಂಡ್ಯ

ಸಿಆರ್‌ಎಸ್‌ಗೆ ಮತ್ತೊಮ್ಮೆ ಸಚಿವ ಗಿರಿ: ಶಾಸಕ ಪಿ.ರವಿಕುಮಾರ್ ಗಣಿಗ ವಿಶ್ವಾಸ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಡಿಕೆಶಿ ಸಿಎಂ ಆಗಬೇಕೆಂದು ಆಸೆ ಪಟ್ಟವರಲ್ಲಿ ನಾನು ಒಬ್ಬ
  • ನಗರದ 14ನೇ ವಾರ್ಡ್‌ನ ಕೆಇಬಿ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಂಡ್ಯ: ಹಿರಿಯ ಶಾಸಕ ಎನ್.ಚಲುವರಾಯಸ್ವಾಮಿ ಅವರು ಮತ್ತೊಮ್ಮೆ ಸಚಿವರಾಗುತ್ತಾರೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ವಿಶ್ವಾಸ ವ್ಯಕ್ತಪಡಿಸಿದರು.
ನಗರದ 14ನೇ ವಾರ್ಡ್‌ನ ಕೆಇಬಿ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಪಟ್ಟಿಯಲ್ಲಿ ಚಲುವರಾಯಸ್ವಾಮಿ ಸಚಿವರಾಗಿದ್ದರು. ಅದೇ ರೀತಿ ಈ ಬಾರಿಯೂ ಆಗುತ್ತಾರೆನ್ನುವ ಅತೀವ ವಿಶ್ವಾಸವಿದೆ. ಜತೆಗೆ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಮಾತ್ರವಲ್ಲದೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಚಿವರಾಗುತ್ತಾರೆ ಎಂದು ಹೇಳಿದರು.
ಇನ್ನು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಮಂತ್ರಿಗಿರಿ ಕೇಳುತ್ತಿದ್ದಾರೆ. ನನ್ನ ಕುಟುಂಬ 50 ವರ್ಷದಿಂದ ರಾಜಕೀಯವಾಗಿ ಸೇವೆ ಮಾಡುತ್ತಿದ್ದೇವೆ. ಜತೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ. ಆದ್ದರಿಂದ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ದಾರೆ. ಅವರಿಗೆ ಕೊಟ್ಟರೂ ಸಂತೋಷ. ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಮೊದಲ ಪಟ್ಟಿ, ಎರಡನೇ ಪಟ್ಟಿ ಆದರೇನು ಬದಲಾವಣೆ ಆಗಲ್ಲ. ಒಟ್ಟಾರೆ ಮಂಡ್ಯಕ್ಕೆ ಮಂತ್ರಿ ಸಿಕ್ಕರೆ ಸಾಕು ಎಂದು ಹೇಳಿದರು.
ತಮಗೆ ಸಚಿವ ಸ್ಥಾನ ನೀಡಬೇಕೆನ್ನುವುದು ಕಾರ್ಯಕರ್ತರ ಆಸೆ. ಆದರೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕೆಂದು ಆಸೆ ಪಟ್ಟವರಲ್ಲಿ ನಾನು ಒಬ್ಬ. ಅವರು ಸಿಎಂ ಆಗಿರುವುದು ನಾನೇ ಮಂತ್ರಿ ಆದಷ್ಟೆ ಖುಷಿ. ಮೊದಲ ಬಾರಿ ಗೆದ್ದಿದ್ದೇನೆ, ಅದರಂತೆ ಎಲ್ಲರಿಗೂ ಆಭಾರಿ ಆಗಿದ್ದಿನಿ. ಎಲ್ಲರಿಗೂ ನಾನು ಸಚಿವರಾಗಬೇಕು ಎನ್ನುವ ಆಸೆ ಇದೆ. ಈ ಹಿನ್ನೆಲೆಯಲ್ಲಿ ನನ್ನ ಬದಲು 5 ಜನ ಹೊಸಬರಿಗೆ ಮಂತ್ರಿ ಸ್ಥಾನ ಕೊಡಿ ಎಂದು ಕೇಳಿದ್ದೇವೆ. ನಾನು ಶಾಸಕನಾಗಿ ಕೆಲಸ ಮಾಡುತ್ತೇನೆ, ಬೇರೆಯವರಿಗೆ ಕೊಡಲಿ ಎಂದರು.
ನೂತನ ಸಚಿವರ ರಾಜೀನಾಮೆ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವ ಮುಖ್ಯಮಂತ್ರಿ ಮಾಡದ ನಿರ್ಣಯವನ್ನು ನಮ್ಮ ಡಿಕೆಶಿ ಮಾಡಿದ್ದಾರೆ. 10 ಸಾವಿರ ಯುವಕರ ಸಂಘ ಕಟ್ಟಿ 10 ಲಕ್ಷ ರೂ. ಕೊಡುತ್ತಿದ್ದಾರೆ. ಯುವಕರು ಆನ್‌ಲೈನ್ ಬೆಟ್ಟಿಂಗ್, ಚಾಟ್, ಯೂಟ್ಯೂಬ್ ನೋಡಿ ಕಾಲ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರೀಡೆಯಲ್ಲಿ ಐತಿಹಾಸಿಕ ನಿರ್ಣಯದ ಮೂಲಕ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇನ್ನು ರಾಮ-ಲಕ್ಷ್ಮಣನ ರೀತಿ ಡಿಕೆಶಿ ಮತ್ತು ಸಿದ್ದರಾಮಯ್ಯ ಇದ್ದಾರೆ. ಸುಮ್ಮನೆ ವಿರೋಧ ಪಕ್ಷದವರು ಜಗಳ ಕಾದು ಕುಳಿತ್ತಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಬೀಳ್ತು ಎಂದು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಅಭಿವೃದ್ಧಿ ಮಾಡುವ ಚಿಂತನೆ ಇದೆ ಅಷ್ಟೆ.
ಬೆಂಗಳೂರು ನಗರದ ಶಾಸಕರಿಂದ ಇದು ಸಹಜ. ಈ ಸಂಬಂಧ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಯಾರು ರಾಜೀನಾಮೆ ಕೊಡಲ್ಲ. ಕರ್ನಾಟಕ ಯಾವ ಮಾದರಿಯಲ್ಲಿ ಅಭಿವೃದ್ಧಿ ಆಗಲಿದೆ ನೋಡುತ್ತಿರಿ ಎಂದು ಹೇಳಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ನಿರ್ದೇಶಕ ಕೃಷ್ಣ, ನಗರಸಭೆ ಮಾಜಿ ಸದಸ್ಯ ಶಶಿಧರ್, ದೊಡ್ಡಯ್ಯ, ಮಂಜುನಾಥ್, ದೀಪಕ್ ಇತರರಿದ್ದರು.

ಬಡವರಿಗೆ ನಿವೇಶನ ಹಂಚಿಕೆ
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು 40 ರಿಂದ 50 ಎಕರೆ ಸರ್ಕಾರಿ ಜಾಗ ಗುರುತು ಮಾಡಲಾಗಿದೆ. ಮುಂದಿನ ಮೂರು ತಿಂಗಳೊಳಗೆ ಎಲ್ಲ ಅರ್ಹರಿಗೂ ನಿವೇಶನ ಹಂಚುತ್ತೇವೆ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ಜೂ.8ರಂದು ಬಸರಾಳು ಮತ್ತು ಹುಲಿವಾನ ಗ್ರಾಮದಲ್ಲಿ ನಿವೇಶನ ಹಂಚಿಕೆ ಸಂಬಂಧಿಸಿದಂತೆ ಗ್ರಾಮಸಭೆ ಆಯೋಜಿಸಲಾಗಿದೆ. ಅಲ್ಲಿಂದಲೇ ಬಡವರಿಗೆ ನಿವೇಶನ ಹಂಚುವ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗುವುದು. ಈ ಗ್ರಾಮಸಭೆಯಲ್ಲಿ 300 ಜನ ಬಡವರಿಗೆ ನಿವೇಶನ ನೀಡಲಾಗುವುದು. ಇದು ಮುಂದಿನ ದಿನದಲ್ಲಿ ಇಡೀ ಕ್ಷೇತ್ರದಲ್ಲಿ ನಡೆಯಲಿದೆ. ನಗರದ ಹಾಲಹಳ್ಳಿಯಲ್ಲಿ 55 ಮನೆ ನಿರ್ಮಾಣಕ್ಕೆ ಶೀಘ್ರದಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು. ಅದೇ ರೀತಿ ಕಾಮಗಾರಿ ಪೂರ್ಣಗೊಳಿಸಿ ನಿವೇಶನರಹಿತರಿಗೆ ಹಂಚಿಕೆ ಮಾಡಲಾಗುವುದು. ಮಂಡ್ಯ ನಗರದ 14 ಮತ್ತು 15ನೇ ವಾರ್ಡ್ ರಸ್ತೆ ಸಂಪೂರ್ಣ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ 75 ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಮೂಲಕ ನಗರದ ಎಲ್ಲ ರಸ್ತೆಗಳಿಗೂ ಕಾಯಕಲ್ಪ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.