ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಗುವಿಗೆ ಪಲ್ಸ್ ಪೋಲಿಯೋ ಹನಿ ಹಾಕಿದರು.
ಪಾಂಡವಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ 0-5 ವರ್ಷದ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಅಭಿಯಾನಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾನುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪೋಲಿಯೋ ತಡೆಗಟ್ಟುವ ಉದ್ದೇಶದಿಂದ ಸರ್ಕಾರವು 0-5 ವರ್ಷ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಪೋಲಿಯೋ ಸೋಂಕು ಒಮ್ಮೆ ಮಕ್ಕಳಿಗೆ ಬಂದರೆ ಹೋಗುವುದಿಲ್ಲ. ಅದಕ್ಕಾಗಿ ಮಕ್ಕಳಿಗೆ ಹನಿ ಹಾಕಿಸಬೇಕು. ಈಗಾಗಲೇ ದೇಶವನ್ನು ಪೋಲಿಯೋಮುಕ್ತ ದೇಶವನ್ನಾಗಿ ಘೋಷಣೆ ಮಾಡಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿ 0-5 ವರ್ಷ ಒಳಪಟ್ಟ 9,731 ಮಕ್ಕಳಿದ್ದಾರೆ ಎಂದು ಗುರುತಿಸಲಾಗಿದೆ. ಲಸಿಕೆ ಅಭಿಯಾನಕ್ಕೆ ಆರೋಗ್ಯ ಇಲಾಖೆಯಿಂದ 57 ಬೂತ್ ನಿರ್ಮಿಸಿ ಇದಕ್ಕಾಗಿ 117 ಸಿಬ್ಬಂದಿ ನಿಯೋಜಿಸಲಾಗಿದೆ. ಆಸ್ಪತ್ರೆ, ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹನಿ ಹಾಕಲಾಗುವುದು. ವಿಶೇಷವಾಗಿ ಸಾರಿಗೆ ಬಸ್ ನಿಲ್ದಾಣ, ಹೊಸಕನ್ನಂಬಾಡಿಯ ವೇಣುಗೋಪಾಲಸ್ವಾಮಿ ದೇವಸ್ಥಾನ ಹಾಗೂ ಮೇಲುಕೋಟೆ ಶ್ರೀ ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಬಳಿ ಬೂತ್ ನಿರ್ಮಿಸಲಾಗಿದೆ. ಶೇ.100 ಗುರಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಟಿಎಚ್‌ಒ ಡಾ.ಸಿ.ಎ.ಅರವಿಂದ್ ಮಾತನಾಡಿ, ಪಾಲಕರು ಕಡ್ಡಾಯವಾಗಿ ಮಕ್ಕಳಿಗೆ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಂಜುನಾಥ್, ಎಲೆಕೆರೆ ಚಂದ್ರಣ್ಣ, ಆರೋಗ್ಯ ಇಲಾಖೆಯ ಶಿವಮ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಜಾಕೀಯಾ ಬಾನು ಇದ್ದರು.