ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿಯಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಚಿರತೆ ಹಾವಳಿ ತಡೆಗಟ್ಟುವಂತೆ ರೈತರು ಶಾಸಕರಿಗೆ ಮನವಿ ಮಾಡಿದರು. 
ಮಂಡ್ಯ

ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್ ನೀಡಿ

ಲಲಾಟಾಕ್ಷ ಎಸ್
ಪಾಂಡವಪುರ: ಚಿರತೆಗಳ ಹಾವಳಿ ಹೆಚ್ಚುತ್ತಿರುವುದರಿಂದ ಹಗಲಿನ ವೇಳೆ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದರು.
ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಪಂನಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ರೈತರು ಶಾಸಕ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡಬ್ಯಾಡರನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರು ಮಾತನಾಡಿ, ಹಲವು ವರ್ಷಗಳಿಂದ ನಾವು ಚಿರತೆ ಹಾವಳಿ ಎದುರಿಸುತ್ತಿದ್ದೇವೆ. ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. 800 ಎಕರೆಗೂ ಹೆಚ್ಚಿನ ವ್ಯಾಪ್ತಿಯ ಕಾಡಿರುವ ಪ್ರದೇಶವಿದು. ಈ ಕಾಡಿಗೆ ಅಂಟಿಕೊಂಡಂತೆ ಗ್ರಾಮಗಳಿದ್ದು, ಚಿರತೆಗಳು ಪದೇ ಪದೆ ಕಾಣಿಸಿಕೊಳ್ಳುತ್ತಿವೆ. ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿದು, ಕಾಡಿಗೆ ಬಿಡುತ್ತೇವೆ ಎಂಬುದಾಗಿ ಹೇಳುತ್ತಾರೆ. ಆದರೆ, ಆ ಚಿರತೆಗಳು ಮತ್ತೆ ಊರುಗಳಿಗೆ ಬಂದು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಸಮಸ್ಯೆಯನ್ನು ವಿವರಿಸಿದರು.
ರಾತ್ರಿ ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವುದರಿಂದ ರೈತರು ಜೀವ ಕೈಯಲ್ಲಿ ಹಿಡಿದು ಜಮೀನಿಗೆ ನೀರು ಹರಿಸಲು ಹೋಗಬೇಕಾಗಿದೆ. ಬದಲಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಲಭ್ಯವಾದರೆ ಚಿರತೆ ಭೀತಿಯಿಂದ ಸ್ವಲ್ಪ ನಿರಾಳವಾಗಬಹುದು. ಆದರೆ ಸೆಸ್ಕ್ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಎಚ್.ಡಿ.ಕೋಟೆಯಲ್ಲಿ ಹುಲಿ ದಾಳಿ ಹಿನ್ನೆಲೆಯಲ್ಲಿ ಸರ್ಕಾರ ಹಗಲು ವಿದ್ಯುತ್ ಪೂರೈಸುವುದಕ್ಕೆ ಕ್ರಮಕೈಗೊಂಡಿತು. ಅದೇ ರೀತಿ ನಮ್ಮ ಭಾಗದಲ್ಲೂ ಕ್ರಮಕೈಗೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಸ್ಥಳದಲ್ಲಿದ್ದ ಪಾಂಡವಪುರ ಇಇ ವಿನುತಾ, ಎಇಇ ರವೀಂದ್ರಕುಮಾರ್ ಹಾಗೂ ಎಇ ಸುಷ್ಮಾ ಅವರು ರೈತರಿಂದ ಮಾಹಿತಿ ಪಡೆದು ಅಗತ್ಯ ಕ್ರಮಕೈಗೊಳ್ಳುವುದಾಗಿ, ಶಾಸಕರಿಗೆ ಹಾಗೂ ಗ್ರಾಮಸ್ಥರಿಗೆ ಭರವಸೆ ನೀಡಿದರು.