ಮಳವಳ್ಳಿ ಪಟ್ಟಣದ ಎಂ.ಜೆ.ಎಕ್ಸೆಲೆನ್ಸ್ ಪಿಯು ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು. ಶೈಕ್ಷಣಿಕ ನಿರ್ದೇಶಕ ಐಸಾಕ್ ವರ್ಮ, ಆಡಿಳಿತಾಧಿಕಾರಿ ವೇದಮೂರ್ತಿ, ಪ್ರಾಂಶುಪಾಲ ಆರ್.ಅಶೋಕ, ಉಪನ್ಯಾಸಕರಾದ ರೂಪೇಶ್, ಉತ್ತಪ್ಪ ಇದ್ದರು.
ಮಳವಳ್ಳಿ: 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ರಾಗಿಬೊಮ್ಮನಹಳ್ಳಿ ಗೆಟ್ ಬಳಿ ಇರುವ ಎಂ.ಜೆ. ಎಕ್ಸಲೆನ್ಸ್ ಪಿಯು ಕಾಲೇಜಿಗೆ ಶೇ.94 ರಷ್ಟು ಫಲಿತಾಂಶ ದೊರೆತಿದೆ.
ಇಲ್ಲಿ ವ್ಯಾಸಂಗ ಮಾಡಿದ್ದ 44 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಫೈಕಿ 14 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ಹಾಗೂ 27 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಫೈಕಿ ವಿಜ್ಞಾನ ವಿಭಾಗದಲ್ಲಿ ಆರ್. ರಂಜಿತಾ 582, ಜಿ.ನಂದನ್ 575 ಮತ್ತು ವಾಣಿಜ್ಯ ವಿಭಾಗದಲ್ಲಿ ಮಾಹಿನ್ ತಾಜ್ 579, ರಿಮಾ ಸಾನಿಯಾ 557 ಅಂಕಗಳನ್ನು ಪಡೆದು ಅತ್ಯುತ್ತಮವಾಗಿ ತೇರ್ಗಡೆಯಾದ ವಿದ್ಯಾರ್ಥಿಗಳಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿರುತ್ತದೆ.
ಉತ್ತಮ ಫಲಿತಾಂಶ ಗಳಿಸಿದ್ದ ವಿದ್ಯಾರ್ಥಿಗಳನ್ನು ಮಂಗಳವಾರ ಕಾಲೇಜು ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಐಸಾಕ್ ವರ್ಮ ಮಾತನಾಡಿ, ನಮ್ಮ ಬೋಧಕ ವರ್ಗ ನೀಡಿದ ಪಠ್ಯಕ್ರಮಗಳ ಬೋಧನೆ ಮತ್ತು ಸಲಹೆ ಸೂಚನೆಗಳನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಲಿಸಿದ ಪರಿಣಾಮ ಉತ್ತಮ ಫಲಿತಾಂಶ ಕಾಣಲು ಸಾಧ್ಯವಾಗಿದೆ. ಕಾಲೇಜು ಪ್ರಾರಂಭವಾದ ಮೊದಲ ವರ್ಷದ ಅವಧಿಯಲ್ಲೇ ಇಂತಹ ಉತ್ತಮ ಸಾಧನೆಯ ಕೀರ್ತಿಯನ್ನು ಸಾಧಿಸಲು ಸುಲಭದ ಕಾರ್ಯವಲ್ಲ. ಈ ಯಶಸ್ಸು ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳು ಮತ್ತು ಎಲ್ಲ ಪ್ರಾಚಾರ್ಯರಿಗೆ ಸಲ್ಲುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾಲೇಜು ಆಡಳಿತ ಅಧಿಕಾರಿ ವೇದಮೂರ್ತಿ, ಪ್ರಾಂಶುಪಾಲ ಆರ್.ಅಶೋಕ, ಉಪನ್ಯಾಸಕರಾದ ರೂಪೇಶ್, ಉತ್ತಪ್ಪ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.