ವ್ಯಕ್ತಿಯ ಶವ ಆತ ವಾಸವಿದ್ದ ಮನೆಯಲ್ಲೇ ಪತ್ತೆ
- ಆರು ತಿಂಗಳಿಂದ ನಾಪತ್ತೆ
- ವ್ಯಕ್ತಿಯ ಶವ ಆತ ವಾಸವಿದ್ದ ಮನೆಯಲ್ಲೇ ಪತ್ತೆ
ಕೆ.ಎಂ.ದೊಡ್ಡಿ: ಆರು ತಿಂಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿಯಲಾಗಿದ್ದ ವ್ಯಕ್ತಿಯ ಶವ ಆತ ವಾಸವಿದ್ದ ಮನೆಯಲ್ಲೇ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಮಹದೇವಸ್ವಾಮಿ(55) ಎಂದು ಗುರುತಿಸಲಾಗಿದೆ. ಸಮೀಪದ ದೊಡ್ಡರಸಿನಕೆರೆ ಗ್ರಾಮದ ಚಿಕ್ಕಮಾಯಿಗಯ್ಯ ಅವರ ಮನೆಯಲ್ಲಿ ಮಹದೇವಸ್ವಾಮಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ 1 ವರ್ಷದಿಂದ ವಾಸವಿದ್ದರು. ಈ ನಡುವೆ ದಾಂಪತ್ಯದಲ್ಲಿ ಜಗಳ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪತ್ನಿ ದೂರವಾಗಿದ್ದರು. ಆ ಬಳಿಕ ಆರು ತಿಂಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಮಹದೇವಸ್ವಾಮಿ ಮನೆ ಖಾಲಿ ಮಾಡಿರಬಹುದು ಎಂದು ಮನೆ ಮಾಲೀಕರು ಭಾವಿಸಿದ್ದರು. ಅಲ್ಲದೆ ಮಾಲೀಕರು ಭಾರತೀನಗರದಲ್ಲಿ ವಾಸವಿದ್ದರಿಂದ ಮನೆಯ ಬಗ್ಗೆ ಗಮನಹರಿಸಿರಲಿಲ್ಲ ಎನ್ನಲಾಗಿದೆ.
ಏಳೂರಮ್ಮನ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದ ಮಾಲೀಕ ಮನೆಯ ಬಾಗಿಲು ಒಡೆದಾಗ ನೋಡಿದಾಗ ಮಹದೇವಸ್ವಾಮಿ ಅವರ ಶವ ಅಸ್ಥಿಪಂಜರದ ಸ್ಥಿತಿಯಲ್ಲಿ ಕಂಡುಬಂತು. ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್ ಅನಿಲ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.