ಬೇಡಿಕೆಗೆ ಸ್ಪಂದಿಸಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಪತ್ರ ಬರೆದಿರುವುದು.
- ನೊದೆಕೊಪ್ಪಲು ಗ್ರಾಮದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ
- ಶ್ರೀರಂಗಪಟ್ಟಣದಲ್ಲಿನ ರೈಲ್ವೆ ನಿಲ್ದಾಣವನ್ನು ತುರ್ತಾಗಿ ಮೇಲ್ದರ್ಜೆಗೇರಿಸಲು ಒತ್ತಾಯ
ಮಂಡ್ಯ: ಜನರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ರೈಲ್ವೆ ಸೌಕರ್ಯ ಕಲ್ಪಿಸಿಕೊಡಬೇಕೆಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಅವರು ಬರೆದ ಪತ್ರಕ್ಕೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸ್ಪಂದಿಸಿದ್ದಾರೆ. ಅಂತೆಯೇ ನಿಯಮಾನುಸಾರ ಸೂಕ್ತ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇಡಿಕೆಗಳ ಬಗ್ಗೆ ಸಚ್ಚಿದಾನಂದ ಪ್ರತ್ಯೇಕವಾರು ಪತ್ರ ಬರೆದು ಸಚಿವರ ಗಮನ ಸೆಳೆದಿದ್ದಾರೆ. ಕೊತ್ತತ್ತಿ ಹೋಬಳಿ ನೊದೆಕೊಪ್ಪಲು ಗ್ರಾಮದ ಸಮೀಪವಿರುವ ಅಂಡರ್‌ಪಾಸ್ ಕಿರಿದಾಗಿದೆ. ಇಲ್ಲಿ ಲಾರಿ ಸೇರಿದಂತೆ ಎತ್ತರದ ವಾಹನಗಳ ಓಡಾಟ ಕಷ್ಟಕರವಾಗಿದೆ. ಮಾತ್ರವಲ್ಲದೆ ಮಳೆ ಬಂದರೆ ನೀರು ನಿಲ್ಲುತ್ತದೆ. ಜತೆಗೆ ವಿದ್ಯುತ್ ದೀಪವೂ ಇಲ್ಲ. ಪರಿಣಾಮ ಮಕ್ಕಳು, ಮಹಿಳೆಯರ ಓಡಾಟಕ್ಕೂ ಕಷ್ಟವಾಗಿದೆ. ಈ ಸಮಸ್ಯೆ ಬಗಹರಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಇದಲ್ಲದೆ, ಶ್ರೀರಂಗಪಟ್ಟಣದಲ್ಲಿನ ರೈಲ್ವೆ ನಿಲ್ದಾಣವನ್ನು ತುರ್ತಾಗಿ ಮೇಲ್ದರ್ಜೆಗೇರಿಸಬೇಕಿದೆ. ಜತೆಗೆ ಪ್ಲಾಟ್ ಫಾರ್ಮ್ ವಿಸ್ತರಣೆ ಮಾಡಬೇಕು. ಬಹುಮುಖ್ಯವಾಗಿ ಕೆಲ ರೈಲುಗಳ ನಿಲುಗಡೆಗೆ ಕ್ರಮವಹಿಸಬೇಕು. ಇದರಿಂದ ಪ್ರತಿನಿತ್ಯ ಸಾವಿರಾರೂ ಜನ ಪ್ರಯಾಣಿಕರಿಗೆ ಉಪಯೋಗವಾಗಲಿದೆ. ಇನ್ನು ಇಂಡುವಾಳು ಗ್ರಾಮದಲ್ಲಿ ಕೆಳ ಸೇತುವೆ ಮಾಡಿಕೊಡಬೇಕು. ಯಲಿಯೂರು ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ರೈಲ್ವೆ ಜಾಗವನ್ನು ಬಿಟ್ಟುಕೊಡಬೇಕು. ಜತೆಗೆ ರೈಲ್ವೆ ಗೂಡ್ಸ್ ಸ್ಟೇಷನ್ ಯಲಿಯೂರು ಗ್ರಾಮದಲ್ಲಿಯೇ ಸ್ದಾಪಿಸಬೇಕೆಂದು ಸಚ್ಚಿದಾನಂದ ಕೇಳಿಕೊಂಡಿದ್ದಾರೆ. ಪತ್ರಕ್ಕೆ ಪ್ರತ್ಯುತ್ತರ ನೀಡಿರುವ ಸಚಿವ ವಿ.ಸೋಮಣ್ಣ, ಸಮಸ್ಯೆಗೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.