ಮಂಡ್ಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿದರು.
- ನರೇಗಾ ಯೋಜನೆ ಬದಲಾವಣೆಗೆ ವಿರೋಧ
- ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ ಅಭಿಯಾನ
- ಕೇಂದ್ರದ ನಿಲುವಿಗೆ ಬಿಜೆಪಿಯಿಂದಲೇ ವಿರೋಧ
ಮಂಡ್ಯ: ಕೋಟ್ಯಂತರ ಜನರಿಗೆ ಉದ್ಯೋಗ ಹಕ್ಕಾಗಿದ್ದ ಮಹಾತ್ಮ ಗಾಂಧೀಜಿ ಉದ್ಯೋಗ ಖಾತರಿ ಯೋಜನೆ(ನರೇಗಾ)ಯ ಹೆಸರಿನ ಜತೆಗೆ ಉದ್ದೇಶವನ್ನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ವಿರುದ್ಧ ಕಾಂಗ್ರೆಸ್‌ನಿಂದ ಕಾನೂನು ಹೋರಾಟದ ಜತೆಗೆ ಬೃಹತ್ ಆಂದೋಲನ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಕಳೆದ 20 ವರ್ಷದಿಂದ ನರೇಗಾ ಯೋಜನೆ ಯಶಸ್ವಿಯಾಗಿ ನಡೆದಿದೆ. ಆಹಾರ ಭದ್ರತಾ ಕಾಯ್ದೆ ಮಾದರಿಯಂತೆ ಕೂಲಿ ಕಾರ್ಮಿಕರಿಗೆ ಉದ್ಯೋಗದ ಹಕ್ಕಾಗಿತ್ತು. ಆದರೆ ಇಂತಹ ಮಹತ್ವದ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ. ಹಿಂದೊಮ್ಮೆ ಎನ್‌ಡಿಎ ಸರ್ಕಾರ ಯೋಜನೆಯನ್ನೇ ರದ್ದು ಮಾಡುವ ಪ್ರಯತ್ನ ಮಾಡಿತ್ತಾದರೂ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಟ್ಟಿತ್ತು. ಆದರೀಗ ‘ವಿಬಿ ಜಿ ರಾಮ್ ಜಿ’ ಎಂದು ಹೆಸರು ಬದಲಾವಣೆ ಮೂಲಕ ಮತ್ತೊಂದು ಯತ್ನಕ್ಕೆ ಮುಂದಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮನರೇಗಾ ಯೋಜನೆಯನ್ನು ಕೇಂದ್ರೀಕೃತಗೊಳಿಸಿ, ವಿಶ್ವದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಲು ಹೊರಟಿದೆ. ಕಾರ್ಮಿಕರ ಘನತೆ, ಗ್ರಾಮ ಸ್ವರಾಜ್ಯ ಮತ್ತು ರಾಷ್ಟ್ರದ ನೈತಿಕ ಜವಾಬ್ದಾರಿಯನ್ನು ನಾಶಪಡಿಸಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಮೂಲ ಮನರೇಗಾ ಕಾಯ್ದೆಯನ್ನು ಮರಳಿ ಜಾರಿಗೊಳಿಸಬೇಕು. ಅಲ್ಲಿಯವರೆಗೂ ವಿವಿಧ ಹೋರಾಟ ನಡೆಸಲಿದೆ. ಮೂರು ಹಂತದಲ್ಲಿ ಹೋರಾಟ ನಡೆಯಲಿದೆ. ಮೊದಲ ಹಂತದಲ್ಲಿ ಹೋರಾಟದ ತಯಾರಿ ಸಭೆಗಳು, ಪಾದಯಾತ್ರೆ ಮತ್ತು ಉಪವಾಸ ಸತ್ಯಾಗ್ರಹ ನಡೆಯಲಿದೆ. ಪ್ರತಿಭಟನೆ ಮೊದಲು ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಗಳಲ್ಲಿ ಪೂರ್ಣ ದಿನದ ತಯಾರಿ ಸಭೆಗಳು ನಡೆಯಲಿದೆ. ಜಿಲ್ಲಾ ಕೇಂದ್ರಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಒಂದು ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದು ವಿವರಿಸಿದರು.
ಹೊಸ ಕಾಯ್ದೆಯಿಂದ ಅನ್ಯಾಯ
ನರೇಗಾ ಕಾಯ್ದೆ ರದ್ದುಪಡಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಅನುಷ್ಠಾನಗೊಳಿಸುವುದರಿಂದ ಕೂಲಿಕಾರರ ಮೇಲೆ ಬಹಳ ದುಷ್ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರವು ನರೇಗಾ ಕಾಯ್ದೆಯನ್ನು ವಾಪಸ್ ಪಡೆಯುವ ಮೂಲಕ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡಿದೆ. ನರೇಗಾ ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಈಗ ಕರಾಳ ಕಾನೂನು ತಂದು ಕಾರ್ಮಿಕರು ಗುತ್ತಿಗೆದಾರರು ಮಾಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕಿದೆ. ಕೂಲಿಕಾರರ ಹಿತ ಕಾಪಾಡುವ ಆಸಕ್ತಿಯನ್ನು ಕೇಂದ್ರ ಸರ್ಕಾರ ತೋರಿಸಿಲ್ಲ. ಬದಲಿಗೆ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ ಎಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.
ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕೆಂದು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಈ ಕರಾಳ ಶಾಸನವನ್ನು ಕರ್ನಾಟಕ ಸರ್ಕಾರ ತೀವ್ರವಾಗಿ ವಿರೋಧಿಸುತ್ತದೆ. ರಾಜಕೀಯ, ಕಾನೂನಾತ್ಮಕವಾಗಿ ಹಾಗೂ ಜನರ ನ್ಯಾಯಾಲಯದಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಹೊಸ ಕಾಯ್ದೆಯಲ್ಲಿ 60 ದಿನ ಕೆಲಸಕ್ಕೆ ವಿರಾಮ ನೀಡಲಾಗುತ್ತಿದೆ. ಇದಲ್ಲದೆ ಮೇಲ್ನೋಟಕ್ಕೆ 125 ದಿನ ಕೆಲಸ ನೀಡುವುದು ಎಂದಿದ್ದರೂ, ನಿರ್ದಿಷ್ಟವಾಗಿ ಆಗುವಂತಿಲ್ಲ. ಇದಕ್ಕೆ ಹಣ ಎಲ್ಲಿದೆ. ಶೇ.40ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಭಾರೀ ಪ್ರಮಾಣದ ಆರ್ಥಿಕ ಹೊರೆ ಬೀಳುವಂತಿದ್ದರೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಚರ್ಚೆ ಮಾಡಬೇಕು. ಆದರೆ, ಆ ರೀತಿ ಮಾಡಿಲ್ಲ. ಏಕಾಏಕಿ ನರೇಗಾ ಕಾಯ್ದೆ ರದ್ದುಪಡಿಸಿ ವಿಬ್ ಜಿ ರಾಮ್ ಜಿ ತರಲಾಗಿದೆ ಎಂದರು.
ಜ.31ರಿಂದ ಫೆ.6ರವರೆಗೆ ಜಿಲ್ಲಾ ಮಟ್ಟದ ಧರಣಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯಲಿದೆ. ಫೆ.7ರಿಂದ 15ರವರೆಗೆ ರಾಜ್ಯ ಮಟ್ಟದ ವಿಧಾನಸಭಾ ಘೇರಾವ್ ನಡೆಯಲಿದೆ. ಫೆ.16ರಿಂದ 25ರವರೆಗೆ ನಾಲ್ಕು ರಾಷ್ಟ್ರಮಟ್ಟದ ರ‌್ಯಾಲಿಗಳು ನಡೆಯಲಿವೆೆ. ದೇಶದ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಮನರೇಗಾ ಯೋಜನೆಯನ್ನು ಜಾರಿಗೆ ತಂದರು. ಈ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರು, ಗ್ರಾ.ಪಂ ವ್ಯಾಪ್ತಿಯಲ್ಲಿ ಕೃಷಿಕ ಬದುಕು, ಆಸ್ತಿಗಳ ರಕ್ಷಣೆ, ಸ್ವತಃ ಸಮಸ್ಯೆಗಳ ನಿವಾರಣೆ, ಕನಿಷ್ಟ ಕೂಲಿ ದೊರಕಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಒದಗಿಸುವ ಯೋಜನೆಯಾಗಿತ್ತು. ವಿಬಿ ಜಿ ರಾಮ್ ಜಿ ಯೋಜನೆಯಿಂದ ಉದ್ಯೋಗ ದೊರಕುವುದೇ ಅನುಮಾನವಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೆಲಸವನ್ನು ಸೀಮಿತಗೊಳಿಸಲಾಗಿದೆ. ಕೇಂದ್ರ ಸರ್ಕಾರ ನೀಡುವ ಅನುಮತಿಯಷ್ಟು ಮಾತ್ರ ಕೆಲಸ ಮಾಡಬೇಕಿದೆ. 100 ದಿನಗಳ ಕೆಲಸ ನೀಡುತ್ತಿದ್ದ ಯೋಜನೆಯನ್ನು 125 ನೀಡುವುದಾಗಿ ಹೇಳಲಾಗುತ್ತಿದೆ. ಆದರೆ, ಸಾಕಷ್ಟು ಅನುದಾನ ನೀಡದ ಕಾರಣ ಈಗ 100 ದಿನಗಳೂ ಕೆಲಸ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಹೆಸರು ಬದಲಿಸಿದ್ದೇ ಮಹಾನ್ ಸಾಧನೆ
11 ವರ್ಷದ ಹಿಂದೆ ಅಂದರೆ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ 53 ಲಕ್ಷ ರೂ ಕೋಟಿ ಸಾಲವಿತ್ತು. ಈಗ 300 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವಿದೆ. ಅಮೆರಿಕಾ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವೇಳೆ ಅವರಿಗೆ ಸಹಕಾರ ನೀಡಿದ ಕೀರ್ತಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಕ್ಕಿದೆ. ಪ್ರಪಂಚವೇ ಮನಮೋಹನ್ ಸಿಂಗ್ ಆರ್ಥಿಕ ತಜ್ಞ ಎಂದು ಕೊಂಡಾಡುತ್ತದೆ. ಅಂತಹವರ ಬಗ್ಗೆಯೂ ಲಘುವಾಗಿ ಮಾತನಾಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಕ್ಕೆ 2019 ರಿಂದ ಇಲ್ಲಿಯವರಗೆ 1.26 ಲಕ್ಷ ಕೋಟಿ ರೂ ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಹಣ ಬರಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಲ್ಲೂ ಕರ್ನಾಟಕ ರಾಜ್ಯಕ್ಕೆ ಕಡಿತ ಮಾಡಿದೆ. ಮೆಟ್ರೋದಲ್ಲೂ ಶೇ. 13ರಷ್ಟನ್ನು ಮಾತ್ರ ಕೇಂದ್ರ ನೀಡುತ್ತಿದೆ. ಉಳಿದ ಶೇ. 87ರಷ್ಟು ಹಣವನ್ನು ಕರ್ನಾಟಕ ರಾಜ್ಯವೇ ಭರಿಸಬೇಕಾಗಿದೆ. ಇದರ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಪ್ರಶ್ನೆ ಮಾಡಿಲ್ಲ. ಇವರು ಯಾವ ನೈತಿಕತೆ ಇಟ್ಟುಕೊಂಡು ಜನರ ಮುಂದೆ ಹೋಗುತ್ತಾರೆ. 11 ವರ್ಷದಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದಿರುವುದೇ ಕೇಂದ್ರದ ಮಹಾನ್ ಸಾಧನೆ ಎಂದು ಟೀಕಾ ಪ್ರಹಾರ ನಡೆಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರಕುಮಾರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲೇಂದ್ರ ಇದ್ದರು.