ಮಂಡ್ಯ ತಾಲೂಕು ಚಿಕ್ಕಮಂಡ್ಯ ಸಮೀಪ ಹೆಲಿಟೂರಿಸಂಗೆ ಚಾಲನೆ ನೀಡಲು ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಮದ್ದೂರು ಶಾಸಕ ಕೆ.ಎಂ.ಉದಯ್ ಅವರನ್ನು ಶಾಸಕ ಪಿ.ರವಿಕುಮಾರ್ ಗಣಿಗ ಅಭಿನಂದಿಸಿದರು.  
ಮಂಡ್ಯ

ಜೆಡಿಎಸ್ ಪಕ್ಷಕ್ಕೆ ಅಧಿಕಾರವೇ ಮುಖ್ಯ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕೆ

ಪ್ರಮುಖ ಮುಖ್ಯಾಂಶಗಳು

  • ಹಿಂದೆ ಜೆಡಿಎಸ್‌ನವರು ಬಿಜೆಪಿಯನ್ನು ಹೆಚ್ಚು ಟೀಕೆ ಮಾಡುತ್ತಿದ್ದರು
  • ಸಿಎಂ ಒಳ್ಳೆಯ ಬಜೆಟ್ ಕೊಡುತ್ತಾರೆ
ಮಂಡ್ಯ: ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ. ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ ಮಿತ್ರತ್ವ ಸಾಕು. 2028ಕ್ಕೆ ಈಗಲೇ ಕೋಟು, ಸೂಟು ಹೊಲಿಸಿಕೊಂಡು ಸಿದ್ಧವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ತಾಲೂಕಿನ ಚಿಕ್ಕಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮಾನ್ಯತೆ ಕೊಟ್ಟಿಲ್ಲ. 19 ಬಿಜೆಪಿ ಎಂಪಿ, 5 ಜನ ಕೇಂದ್ರ ಮಂತ್ರಿ ಇದ್ದೂರು ರಾಜ್ಯಕ್ಕೆ ಏನಾದ್ರು ಕೊಡುಗೆ ಇದ್ಯಾ?. ಹಿಂದೆ ಜೆಡಿಎಸ್‌ನವರು ಬಿಜೆಪಿಯನ್ನು ಹೆಚ್ಚು ಟೀಕೆ ಮಾಡುತ್ತಿದ್ದರು. ಇವಾಗ ಜೆಡಿಎಸ್ ಸೈಲೆಂಟ್ ಆಗಿದೆ. ಅಂದರೆ ಜೆಡಿಎಸ್‌ಗೆ ಅಧಿಕಾರನೆ ಮುಖ್ಯವಾಗಿದೆ ಎಂದು ಟೀಕಿಸಿದರು.
ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟರು ಸದ್ದಿಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಐದು ನಿಮಿಷಕ್ಕೆ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ ಎಂದಿದ್ದರು. ಆದರೆ ಈವರೆಗೆ ಮಾಡಲಿಲ್ಲ. ಈ ನಡುವೆ ಕೋಟು ಸೂಟು ಹೋಲಿಸಿಕೊಂಡು ರೆಡಿ ಇದ್ದಾರೆ. ಜತೆಗೆ ಅವರವರೇ ಖಾತೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇನ್ನು ಎರಡೂವರೆ ವರ್ಷ ಇದೆ ಎನ್ನುವುದನ್ನು ಮರೆತಿದ್ದಾರೆ. 2028ಕ್ಕೆ ಯಾವ ಸರ್ಕಾರ ಬರಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಕೆಲವರು ಮಗು ಹುಟ್ಟುವ ಮುನ್ನವೇ ಕುಲಾವಿ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ತಿಕ್ಕಾಟ ಪ್ರಾರಂಭವಾಗಿದೆ. ನಮ್ಮ ಸರ್ಕಾರ ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ಕೊಡುತ್ತಿದೆ. ಇದರ ಜತೆಗೆ ಅಭಿವೃದ್ಧಿ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಬಜೆಟ್ ಕೊಡುತ್ತಾರೆ ಎನ್ನುವ ಭರವಸೆ ಇದೆ ಎಂದರು.
ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪ್ರವಾಸಕ್ಕೆ ಹೋದರೆ ಯಾರ ಪರ ಅಥವಾ ವಿರುದ್ದವೆಂದಲ್ಲ. ಈ ವಿಚಾರಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದು ಸಧ್ಯಕ್ಕೆ ತಣ್ಣಗಾಗಿದೆ. ಶಾಸಕ ರವಿಕುಮಾರ್ ಗಣಿಗ ಅವರು ಕೂಡ ವಿದೇಶಿ ಪ್ರವಾಸ ಮಾಡಿದರು. ಪ್ರವಾಸ ಮಾಡುವುದು ಅವರ ವೈಯಕ್ತಿಕ. ಇದು ದೊಡ್ಡ ವಿಚಾರ ಅಲ್ಲ, ಅದರಂತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ಹೈಕಮಾಂಡ್ ಸೂಕ್ತ ಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದರಂತೆ ಪಕ್ಷಕ್ಕೆ ಡ್ಯಾಮೆಜ್ ಆಗಲು ಬಿಡಲ್ಲ. ನಮ್ಮ ಸಿಎಂ, ಡಿಸಿಎಂ ಇಬ್ಬರು ಹೈಕಮಾಂಡ್ ತೀರ್ಮಾನಕ್ಕೆ ಬದ್ದವೆಂದು ಹೇಳಿದ್ದಾರೆ ಎಂದರು.
ವಿಧಾನಸೌಧಕ್ಕೆ ಪತ್ರಕರ್ತರ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರಿ ಮತ್ತು ತಪ್ಪು ವಿಶ್ಲೇಷಣೆ ಮಾಡುವುದಲ್ಲ. ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬೇಕು. ಯಾವ ಕಾರಣಕ್ಕೆ ನಿರ್ಬಂಧ ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲ. ಸ್ಪೀಕರ್ ಬಳಿ ಈ ಬಗ್ಗೆ ಮಾತನಾಡುತ್ತೇವೆ. ಇನ್ನು ಸರ್ಕಾರ ಟೇಕ್ ಆಫ್ ಆಗಿದೆ, ಇಲ್ಲ ಎನ್ನುವುದನ್ನು ಯಾವ ರೀತಿ ಮಾನದಂಡದಲ್ಲಿ ಅಳೆಯುವುದು. ಕಳೆದ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ?. ಎಲ್ಲವನ್ನೂ ಪಟ್ಟಿ ಮಾಡಿ ನೋಡಿ. ಇವಾಗ ಏನು ಅಭಿವೃದ್ಧಿ ಆಗಿದೆ ಎಂದು ಹೊಂದಾಣಿಕೆ ಮಾಡಿ. ಅವಾಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಶಾಸಕರಾದ ಪಿ.ರವಿಕುಮಾರ್ ಗಣಿಗ, ಕೆ.ಎಂ.ಉದಯ್ ಇದ್ದರು.