ಮಿಮ್ಸ್‌ನಲ್ಲಿ ತೆರೆದಿರುವ ತಾಯಿ ಹಾಲು ಸಂಗ್ರಹಣಾ ಕೇಂದ್ರ(ಶಿಶು ಸಂಜೀವಿನಿ) ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವೀಕ್ಷಿಸಿದರು.  
ಮಂಡ್ಯ

ಸಾರ್ವಜನಿಕರ ಅನುಕೂಲಕ್ಕೆ ಹಲವು ಕಾರ್ಯಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

ಕೆ.ಎನ್.ರಾಘವೇಂದ್ರ
ಮಂಡ್ಯ: ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿ ಮಕ್ಕಳ ಆರೋಗ್ಯ ಕಾಪಾಡುವುದು ಮತ್ತು ಮಕ್ಕಳ ಮರಣ ಸಂಖ್ಯೆಯನ್ನು ತಪ್ಪಿಸುವ ಸದುದ್ದೇಶದಿಂದ ಶಿಶು ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಿಮ್ಸ್‌ನಲ್ಲಿ ಮಿಡ್ ವೈಫರಿ ಆಧಾರಿತ ಆರೈಕೆ ಘಟಕ ಮತ್ತು ತಾಯಿ ಹಾಲು ಸಂಗ್ರಹಣಾ ಕೇಂದ್ರ(ಶಿಶು ಸಂಜೀವಿನಿ) ಘಟಕಗಳ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಂಡು ಬರುತ್ತಿದೆ. ತಾಯಿ ಮಗುವಿನ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಶಿಶು ಸಂಜೀವಿನಿ ಯೋಜನೆ ಮಹತ್ವದಾಗಿದೆ ಎಂದು ಹೇಳಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಎಂಎಲ್‌ಸಿಯು ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು

ಶಿಶು ಸಂಜೀವಿನಿ ಯೋಜನೆಯಿಂದ ಮುಂಚಿತವಾಗಿ ಹೆರಿಗೆ ಆಗುವ ಮಕ್ಕಳಿಗೆ ಮತ್ತು ಪೌಷ್ಟಿಕಾಂಶ ಕೊರತೆಯಿರುವ ಮಕ್ಕಳಿಗೆ ಉಪಯುಕ್ತವಾಗುತ್ತದೆ. ತಾಯಿಯಂದರಿಗೆ ಹಾಲು ಸಂಗ್ರಹಿಸಿ ಇಟ್ಟುಕೊಳ್ಳುವುದರಿಂದ ಅನಾನುಕೂಲ ಉಂಟಾಗುತ್ತದೆ ಹಾಗೂ ಎದೆ ಹಾಲನ್ನು ಕೊಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿ ಜಿಲ್ಲೆಯಲ್ಲಿ ತಾಯಿ ಎದೆ ಹಾಲು ಸಂಗ್ರಹ ಘಟಕವನ್ನು ಪ್ರಾರಂಭಿಸಲಾಗಿದೆ ಇದು ನಿಜಕ್ಕೂ ಶ್ಲಾಘನೀಯ. ಮಕ್ಕಳ ಆರೋಗ್ಯ ಕಾಪಾಡುವುದು ಮತ್ತು ಮಕ್ಕಳ ಮರಣ ಸಂಖ್ಯೆಯನ್ನು ತಪ್ಪಿಸುವ ಸದುದ್ದೇಶದಿಂದ ಶಿಶು ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಪಿ.ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಉಪಕಾರ್ಯದರ್ಶಿ ಲಕ್ಷ್ಮೀ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ವಿಜಯಲಕ್ಷ್ಮೀ ರಘುನಂದನ್, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು.

ಎಲ್ಲ ಶಾಸಕರಿಂದಲೂ ಸಹಕಾರ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ನಂದಿನಿ ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವುದು ಅತಿ ಮುಖ್ಯ. ವರದಿಗಳ ಪ್ರಕಾರ ತಾಯಿ ಮತ್ತು ಮಗುವಿನ ಆರೋಗ್ಯ ಹೆಚ್ಚಿರುವ ಕಡೆ ಆರ್ಥಿಕ ಪ್ರಗತಿಯನ್ನು ನಾವು ಕಾಣಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸುವ ತಾಯಿ ಮತ್ತು ಮಗುವಿನ ಮರಣದ ಬಗ್ಗೆ ತಜ್ಞ ವೈದ್ಯರ ವರದಿಯ ಕುರಿತು ಪ್ರತಿಯೊಂದು ಪ್ರಕರಣಕ್ಕೂ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಮರಣವನ್ನು ತಡೆಗಟ್ಟಲು ಶಿಶು ಸಂಜೀವಿನಿ ಯೋಜನೆ ತರಲಾಗಿದೆ. ತಾಯಿಯ ಎದೆ ಹಾಲಿಗಿಂತ ಸರ್ವ ಶ್ರೇಷ್ಟ ಉಡುಗೊರೆ ಮತ್ತೊಂದಿಲ್ಲ. ಈ ಯೋಜನೆ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಹಕಾರ ನೀಡಿದ್ದು ಸಂತಸದ ಸಂಗತಿ. ಅದರ ಪರಿಣಾಮ ಮಿಡ್ ವೈಫರಿ ಆಧಾರಿತ ಆರೈಕೆ ಘಟಕ ಮತ್ತು ತಾಯಿ ಹಾಲು ಸಂಗ್ರಹಣ ಕೇಂದ್ರ ಘಟಕ ನಿರ್ಮಾಣವಾಗಿದೆ. ಇದಕ್ಕೆ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.