ಪಾಂಡವಪುರ ಪಟ್ಟಣದ ಆಡಳಿತ ಸೌಧದ ತಹಸೀಲ್ದಾರ್ ಕೋರ್ಟ್ ಸಭಾಂಗಣದಲ್ಲಿ ಉಪವಿಭಾಗಾಧಿಕಾರಿ ಕೆ.ಆರ್.ಶೀನಿವಾಸ್ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದರು. ಆದರ್ಶ, ವೈ.ಪಿ.ಮಂಜು, ಕೆನ್ನಾಳು ನಾಗರಾಜು, ಎಚ್.ತ್ಯಾಗರಾಜು, ರಾಮಕೃಷ್ಣೇಗೌಡ ಇತರರು ಇದ್ದರು. 
ಮಂಡ್ಯ

‘ಮೇಲುಕೋಟೆ’ ಎಸ್‌ಐಆರ್ ಪ್ರಕ್ರಿಯೆ ಶೇ.85 ಪೂರ್ಣ

ಲೋಕೇಶ್ ಮನು. ಡಿ
ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯೂ ಶೇ.85ರಷ್ಟು ಪೂರ್ಣಗೊಂಡಿದೆ ಎಂದು ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಆಡಳಿತ ಸೌಧದ ತಹಸೀಲ್ದಾರ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಎಸ್‌ಐಆರ್ ಪ್ರಗತಿ ಕುರಿತು ಮಾಹಿತಿ ನೀಡಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,04,659 ಮತದಾರರಿದ್ದು, ಈವರೆಗೆ 1,74,461 ಮತದಾರರ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮೃತರು, ಸ್ಥಳಾಂತರಗೊಂಡಿರುವ 2,558 ಮತದಾರರನ್ನು ಪಟ್ಟಿಯಿಂದ ತೆಗೆಲಾಗಿದೆ. ಒಂದೇ ಹೆಸರಿನ 358 ಮತದಾರರು ಹಾಗೂ ಒಂದೇ ತರಹ ಭಾವಚಿತ್ರವಿರುವ 91 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರವೇ ಪ್ರಗತಿ ಸಾಧನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪರಿಶೀಲನೆ ನಡೆಸಬಹುದು ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತದಾರರ ಕರುಡು ಪ್ರತಿಯನ್ನು ಪ್ರಕಟಿಸಲಾಗುವುದು, ಒಂದು ತಿಂಗಳ ಕಾಲಾವಕಾಶ ಇದ್ದು, ಮತದಾರರನ್ನು ಸೇರಿಸುವುದಕ್ಕೆ ಅಥವಾ ಕೈಬಿಡುವುದಕ್ಕೆ ಸೂಕ್ತ ದಾಖಲಾತಿ ನೀಡಿದರೆ ಕ್ರಮವಹಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪ್ರತಿ ಮನೆಗೆ ವಿತರಿಸುವ ಕಾರ್ಯಕ್ರಮ ಜಾರಿಗೊಳಿಸಿದ್ದು, ನಾಳೆಯಿಂದ ಅದರ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ಆದರ್ಶ, ರೈತ ಸಂಘ ತಾಲೂಕು ಅಧ್ಯಕ್ಷ ವೈ.ಪಿ.ಮಂಜು, ಮುಖಂಡ ಕೆನ್ನಾಳು ನಾಗರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು, ಜೆಡಿಎಸ್ ಮುಖಂಡ ರಾಮಕೃಷ್ಣೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ನೀಲನಹಳ್ಳಿ ಧನಂಜಯ ಇತರರು ಇದ್ದರು.