ಮೇಲುಕೋಟೆಯ ರಾಜಬೀದಿಯಲ್ಲಿ ದೇವಾಲಯಗಳ ರಾಜಗೋಪುರ ಮಾದರಿಯಲ್ಲಿ ನಿರ್ಮಿಸುತ್ತಿರುವ ಸ್ವಾಗತ ಕಮಾನುಗಳು.
- ದೀಪಾಲಂಕಾರದಿಂದ ಕಂಗೊಳಿಸುತ್ತಿದೆ ಶ್ರೀಕ್ಷೇತ್ರ
ಮೇಲುಕೋಟೆ : ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಸಜ್ಜುಗೊಂಡಿದೆ. ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡುತ್ತಿದ್ದು, ವಿವಿಧ ರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ಮೇಲುಕೋಟೆಗೆ ಬಂದಿಳಿಯುತ್ತಿದ್ದಾರೆ.
ಜಿಲ್ಲಾಡಳಿತ ಹಲವು ಸಭೆಗಳನ್ನು ಮಾಡಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಯನ್ನು ವಹಿಸಿದೆ. ಮೇಲುಕೋಟೆಯ ಕಲ್ಯಾಣಿ ರಾಜಬೀದಿ ದೇವಾಲಯ ಉತ್ಸವ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಮತ್ತಷ್ಟು ಅಚ್ಚುಕಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ. ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಹಾಗೂ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಮೀನ-ಚೈತ್ರಮಾಸದ ಪಷ್ಯ ನಕ್ಷತ್ರದ ಶುಭದಿನವಾದ ಮಾ.28ರಂದು ರಾತ್ರಿ ಚೆಲುವನಾರಾಯಣಸ್ವಾಮಿ ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯಲಿದೆ. ಉತ್ಸವ ರಾತ್ರಿ 8ರಿಂದ ಆರಂಭವಾಗಿ ತಡರಾತ್ರಿ 4 ಗಂಟೆಯವರೆಗೆ ನಡೆಯಲಿದೆ. ವೈರಮುಡಿ ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಜಿಲ್ಲಾ ಖಜಾನೆಯಿಂದ 28 ರಂದು ಬೆಳಿಗ್ಗೆ 7ಕ್ಕೆ ಹೊರತಂದು ಮಂಡ್ಯದ ಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದಲ್ಲಿ ಪ್ರಥಮಪೂಜೆ ನೆರವೇರಿಸಲಾಗುತ್ತದೆ. ಶ್ರೀರಂಗಪಟ್ಟಣ ಮಾರ್ಗವಾಗಿ ಬರುವ ತಿರುವಾಭರಣಪೆಟ್ಟಿಗೆಗೆ ದಾರಿಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಮೇಲುಕೋಟೆಗೆ ಬಂದ ನಂತರ ಕಿರೀಟಗಳಿಗೆ ಯತಿರಾಜದಾಸರ್ ಗುರುಪೀಠದಲ್ಲಿ ಕೊನೆಯ ಪೂಜೆ ನಡೆದ ನಂತರ ದೇವಾಲಯ ಪ್ರವೇಶಿಸುತ್ತವೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾರ್ಗದರ್ಶನಲ್ಲಿ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಅವರ ಸೂಚನೆಯಂತೆ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಮಹೋತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಶ್ರಮಿಸುತ್ತಿದ್ದಾರೆ.
ಪ್ರಥಮ ಭಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ಯೋಗ ನರಸಿಂಹಸ್ವಾಮಿಬೆಟ್ಟ ಭುವನೇಶ್ವರಿ ಮಂಟಪಗಳಿರುವ ಮಾದರಿಯಲ್ಲಿ ಲೈಟಿಂಗ್ ಸಮೇತ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಇಂದು ನಾಗವಲ್ಲಿ ಮಹೋತ್ಸವ ಶ್ರೀರಾಮನವಮಿ
ಪರಾಭವನಾಮ ಸಂವತ್ಸವರದ ವೈರಮುಡಿ ಬ್ರಹ್ಮೋತ್ಸವದ ಮೂರನೇ ತಿರುನಾಳ್ ದಿನವಾದ ಮಾ.27 ರಂದು ಮದ್ಯಾಹ್ನ 3ಗಂಟೆಗೆ ನಾಗವಲ್ಲಿ ಉತ್ಸವ ಆರಂಭವಾಗಲಿದೆ. ಕಲ್ಯಾಣನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ಚೆಲುವನಾರಾಯಣಸ್ವಾಮಿ ಉತ್ಸವಕ್ಕೂ ಮೊದಲು ನಾಗವಲ್ಲಿ ನರಂದಾಳಿಕಾರೋಹಣ ನಡೆಯಲಿದೆ. ರಾತ್ರಿ 9ರ ನಂತರ ಚಂದ್ರಮಂಡಲವಾಹನೋತ್ಸವ ನಡೆಯಲಿದೆ.
ಅನ್ನದಾನ ಭವನದಲ್ಲಿ 24 ಗಂಟೆ ಪ್ರಸಾದ ವಿತರಣೆ ನಡೆಯಲಿದೆ. 10 ಬೃಹತ್ ಪರದೆಗಳ ಮೂಲಕ ಉತ್ಸವ ಬೀದಿಯಲ್ಲಿ ಪ್ರಸಾರ ಮಾಡಲಿದ್ದು, ಜಕ್ಕನಹಳ್ಳಿಯಿಂದ ಮೇಲುಕೋಟೆವರೆಗೆ ದೀಪಾಲಂಕಾರ ಮಾಡಲಾಗಿದೆ. ಕಣಿವೆಯಿಂದ 2 ಕಿಮೀ.ನಿಂದಲೇ ದೀಪಾಲಂಕಾರದಲ್ಲಿ ಮೇಲುಕೋಟೆ ಝಗಮಗಿಸುತ್ತಿದೆ. ಭಕ್ತರ ಸುರಕ್ಷತೆಗಾಗಿ 1500 ಪೊಲೀಸರನ್ನು ನಿಯೋಜಿಸಿದ್ದು, 64 ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ಶುದ್ಧ ಕುಡಿಯುವ ನೀರು, ನಿರಂತರ ಸ್ವಚ್ಛತೆ ಮಾಡಲಿದ್ದು, ಹೊರಜಿಲ್ಲೆಗಳಿಂದ 150 ವಿಶೇಷ ಬಸ್ ನಿಯೋಜಿಸಲಾಗಿದೆ.
ಭಕ್ತರ ವಾಹನಗಳಿಗೆ ಪಾರ್ಕಿಂಗ್‌ಗೆ 26 ಕಡೆ ಜಾಗ ಗುರುತಿಸಲಾಗಿದೆ. ದೇವಾಲಯದ ಆವರಣಗಳಿಗೆ ಆಕರ್ಷಕ ಪುಷ್ಪಾಲಂಕಾರ ಮಾಡಿದ್ದು, ಮಹಾರಾಜರು ವೈರಮುಡಿ ಉತ್ಸವ ವೀಕ್ಷಣೆ ಮಾಡುತ್ತಿದ್ದ ನಯನ ಮನೋಹರ ಪುಷ್ಪಮಂಟಪ ನಿರ್ಮಾಣ ಮಾಡಲಾಗಿದೆ. ಇದಲ್ಲದೇ ವಿಶೇಷ ತೋಮಾಲೆ ಸೇವೆ, ವಿಶೇಷ ಮಂಗಳವಾದ್ಯ ತಂಡ ನಿಯೋಜನೆ ಮಾಡಲಾಗಿದ್ದು, ಕಲ್ಯಾಣಿ, ಬೆಟ್ಟ, ದೇವಾಲಯ ಬಸ್‌ನಿಲ್ದಾಣ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಆಂಬುಲೆನ್ಸ್‌ನೊಂದಿಗೆ ವೈದ್ಯಕೀಯ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಎರಡನೇ ತೆಪ್ಪೋತ್ಸವದಂದು ಲೇಸರ್ ಪ್ರದರ್ಶನ, ತೆಪ್ಪೋತ್ಸವ, ಭರತನಾಟ್ಯ, ಚಂಡೆವಾದನ, ನಾದಸ್ವರ ವಾದನ ನಡೆಯಲಿದೆ.