ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಹೊರ ನೋಟ
ಮೇಲುಕೋಟೆ : ರಾಜ್ಯದ ಸುಪ್ರಸಿದ್ಧ ಶ್ರೀ ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಜ್ರಾಂಗಿ ಆಭರಣ ಅವ್ಯವಹಾರದ ಸಂಬಂಧ ವ್ಯವಸ್ಥಾಪನಾ ಸಮಿತಿ ವಜಾ ಆದ ಹತ್ತು ವರ್ಷಗಳ ನಂತರ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ.
ದೇವಾಲಯದ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೋರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಸೂಚನೆಯ ಮೇರೆಗೆ ರಾಜ್ಯಧಾರ್ಮಿಕ ಪರಿಷತ್‌ನಲ್ಲಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯತ್ವ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮ ಪ್ರಕ್ರಿಯೆ ನಡೆದ ನಂತರ ನೂತನವಾಗಿ 8 ಜನರ ವ್ಯವಸ್ಥಾಪನಾಸಮಿತಿ ರಚಿಸಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ
ನೂತನ ಸದಸ್ಯರಾಗಿ ಬಳಿಘಟ್ಟ ಗ್ರಾಮದ ವೆಂಕಟೇಶ್, ಮೇಲುಕೋಟೆಯ ಹಾಲಿನ ಡೈರಿ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ಅವರ ಪತ್ನಿಶೋಭಾ, ಮೈಸೂರಿನ ಡಾ.ಪ್ರೀತಿ ಮಹದೇವ್, ಪಾರ್ವಟೆ ಹೊಸಳ್ಳಿಯ ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಡಾ.ವಿ. ವೆಂಕಟರಾಮೇಗೌಡ, ಕಾಡೇನಹಳ್ಳಿಯ ವಕೀಲರಾದ ಸತೀಶ್, ಜಕ್ಕನಹಳ್ಳಿಯ ಕೆ.ಎಚ್. ಪುಟ್ಟಸ್ವಾಮಿ, ಕನಗೋನಹಳ್ಳಿಯ ಸಮಾಜಸೇವಕ ಪರಮೇಶ್‌ಗೌಡ, ಬ್ರಹ್ಮದೇವರಹಳ್ಳಿಯ
ಬಿ.ವಿ. ರಾಜು ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
ನಾಮನಿರ್ದೇಶನವಾಗಿ ಪ್ರಧಾನ ಅರ್ಚಕ ಅಥವಾ ಅರ್ಚಕ ಹುದ್ದೆಯ ಸದಸ್ಯರ ಸ್ಥಾನವನ್ನು ಖಾಲಿ ಬಿಡಲಾಗಿದೆ. ಕಾರ್ಯದರ್ಶಿಯನ್ನಾಗಿ ದೇವಾಲಯದ ಇಒ ಶೀಲಾ ಅವರನ್ನು ನೇಮಿಸಲಾಗಿದೆ. ನೀತಿ ನಿಯಮಾವಳಿ, ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ ಅರ್ಹ ಅರ್ಚಕರನ್ನು ಸಮಿತಿಗೆ ನೇಮಿಸಲು ದೇವಾಲಯದ ಇಒ ನೀಡುವ ವರದಿ ಆಧರಿಸಿ ನೇಮಕಾತಿ ನಡೆಯುವುದು ಬಾಕಿ ಉಳಿದಿದೆ. ಮುಂಬರುವ ಮಾ. 28 ರಂದು ನಡೆಯುವ ವಿಶ್ವವಿಖ್ಯಾತ ವೈರಮುಡಿ ಉತ್ಸವದ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಜೊತೆಗೆ ವ್ಯವಸ್ಥಾಪನಾ ಸಮಿತಿಯ ಪಾತ್ರವೂ ಪ್ರಮುಖವಾಗಲಿದೆ.