ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
- ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ
- ಐಐಟಿ ಮದ್ರಾಸ್‌ನ ರಸ್ತೆ ಸುರಕ್ಷತೆಯ ಶ್ರೇಷ್ಟತಾ ಕೇಂದ್ರದ ಅಧಿಕಾರಿಗಳು ಭಾಗಿ
ಮಂಡ್ಯ: ರಸ್ತೆ ಸುರಕ್ಷತೆ ಸುಧಾರಿಸಲು ಮತ್ತು ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಐಐಟಿ ಮದ್ರಾಸ್‌ನಲ್ಲಿ ರಸ್ತೆ ಸುರಕ್ಷತೆಯ ಶ್ರೇಷ್ಟತಾ ಕೇಂದ್ರ ಸ್ಥಾಪಿಸಿದೆ. ಅದರಂತೆ ಡೇಟಾ ವಿಶ್ಲೇಷಣೆಯ ಮೂಲಕ ರಸ್ತೆ ಅಪಘಾತಗಳ ಕಾರಣ ಪತ್ತೆ ಮಾಡಲಾಗುವುದು. ಈ ಮೂಲಕ ಅಪಘಾತಗಳನ್ನು ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಆದ್ಯತೆಗಳ ಕುರಿತು ಐಐಟಿ ಮದ್ರಾಸ್‌ನ ರಸ್ತೆ ಸುರಕ್ಷತೆಯ ಶ್ರೇಷ್ಟತಾ ಕೇಂದ್ರದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಲ್ಕು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತವೆ. ಈ ಹೆದ್ದಾರಿಯಲ್ಲಿ ಕಪ್ಪುಸ್ಥಳಗಳನ್ನು ಗುರುತಿಸಿ, ಅಪಘಾತಗಳನ್ನು ತಡೆಗಟ್ಟಲು ಇಂತಹ ಕೇಂದ್ರಗಳ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು ಎಂದರು.
ರಸ್ತೆ ಸುರಕ್ಷತೆಯ ಶ್ರೇಷ್ಟತಾ ಕೇಂದ್ರವು ಡೇಟಾ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರೋಗ್ಯ, ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ಮೇ 16ರಂದು ಮಿಮ್ಸ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.
ರಸ್ತೆ ಸುರಕ್ಷತೆಯ ಶ್ರೇಷ್ಟತಾ ಕೇಂದ್ರದ ವ್ಯವಸ್ಧಾಪಕ ಡಾ.ರೋಷನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಮರಣ ಸಂಭವಿಸುವ ಕಾರಿಡಾರ್‌ಗಳನ್ನು ಸರ್ಕಾರ ಗುರುತಿಸಿದೆ. ಮತ್ತು ನಮ್ಮ ಕಂಪನಿಯಿಂದ ಅಪಘಾತಗಳನ್ನು ಕಡಿಮೆ ಮಾಡಲು ಸ್ಥಳದ ಅವಶ್ಯಕತೆಗಳ ಆಧಾರದ ಮೇಲೆ ವಿವಿಧ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಡೇಟಾ ವಿಶ್ಲೇಷಣೆಯ ಮೂಲಕ ರಸ್ತೆ ಅಪಘಾತಗಳ ಕಾರಣಗಳನ್ನು ಪತ್ತೆ ಹಚ್ಚುವುದು. ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಲೋಕೊಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಪುರುಷೋತ್ತಮ್, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಮುಡಾ ಆಯುಕ್ತ ಕೃಷ್ಣಕುಮಾರ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.