ಮಂಡ್ಯದಲ್ಲಿ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.
- ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್) ನಿಧಿ ಬಳಕೆ
- ಗಣಿಗಾರಿಕೆಯಿಂದ ಬಾಧಿತರಾದ ಪ್ರದೇಶದಲ್ಲಿ ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸಿ
- ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ
ಮಂಡ್ಯ: ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್) ನಿಧಿಯನ್ನು ಬಳಸಿಕೊಂಡು ಗಣಿಗಾರಿಕೆಯಿಂದ ಬಾಧಿತರಾದ ಪ್ರದೇಶದಲ್ಲಿ ಸಾರ್ವಜನಿಕರಿಗೆ ಮೂಲಸೌಕರ್ಯಗಳನ್ನು ನೀಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣಿಗಾರಿಕೆಯಿಂದ ನೇರವಾಗಿ ಬಾಧಿತರಾದ ಜನರ ಜೀವನಮಟ್ಟ ಸುಧಾರಿಸುವುದು ಹಾಗೂ ಬಾಧಿತವಾದ ಪ್ರದೇಶಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಜನಸಾಮಾನ್ಯರ ಅರೋಗ್ಯ, ಶಿಕ್ಷಣ, ವೈದ್ಯ ಮತ್ತು ನೈರ್ಮಲ್ಯ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ನಿಧಿಯ ಶೇ.70 ಕ್ಕಿಂತ ಹೆಚ್ಚು ಭಾಗವನ್ನು ಗಣಿಗಾರಿಕೆಯಿಂದ ನೇರವಾಗಿ ಬಾಧಿತವಾದ ಪ್ರದೇಶಗಳಲ್ಲಿನ ಕಾಮಗಾರಿಗಳಿಗೆ ಬಳಸಬೇಕು. ಈ ನಿಟ್ಟಿನಲ್ಲಿ ಗಣಿಗರಿಕೆಯಿಂದ ಬಾಧಿತವಾದ ವಲಯಗಳಿಗೆ ಕುಡಿಯುವ ನೀರು, ಶುದ್ದೀಕರಣ ವ್ಯವಸ್ಥೆ, ನೀರು ಸಂಸ್ಕರಣಾ ಘಟಕಗಳು ಕಲ್ಪಿಸಿ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಶಿಕ್ಷಣ ಕೌಶಲ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಡಿಎಫ್‌ಒ ರಘು, ಹಿರಿಯ ಭೂ ವಿಜ್ಞಾನಿ ಪುಷ್ಪಾ, ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆ ಉಪನಿರ್ದೇಶಕ ದಿನೇಶ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಗೀತಾ ಇತರರಿದ್ದರು.