ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿದರು.  
ಮಂಡ್ಯ

ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗದಿರಲಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
  • ಪರ್ಯಾಯ ಸಾರಿಗೆ ವ್ಯವಸ್ಥೆಗಳ ಮಾಡಿಕೊಳ್ಳಬೇಕು
ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ಸಾರಿಗೆ ವ್ಯವಸ್ಥೆಗಳ ಮಾಡಿಕೊಳ್ಳಬೇಕು. ಈ ಮೂಲಕ ಪ್ರಯಾಣಿಕರಿಗೆ ತೊಂದರೆ ಅಡಚಣೆಯಾಗದಂತೆ ಕ್ರಮ ವಹಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಖಾಸಗಿ ವಾಹನ ಮಾಲೀಕರ ಸಂಘ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರು ಬಸ್ ಡಿಪೋಗಳಿವೆ. ಇದರಲ್ಲಿ ಕೆಎಸ್‌ಆರ್‌ಟಿಸಿ 509 ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, 493 ರೂಟ್‌ಗಳಲ್ಲಿ ಬಸ್ ಸಂಚಾರ ಮಾಡುತ್ತಿವೆ ಎಂದರು.
ನೌಕರರು ಬಸ್‌ಗಳನ್ನು ಚಾಲನೆ ಮಾಡುವಂತೆ ಹಾಗೂ ಸಂಘಟನೆಯವರಿಗೆ ತಿಳಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಶರಣ ಬಸವರಾಜ್ ಅವರಿಗೆ ಸೂಚಿಸಿದ ಡಿಸಿ, ಕೆಎಸ್‌ಆರ್‌ಟಿಸಿ, ಪ್ರಾದೇಶಿಕ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಪ್ರಮಾಣಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು.
ಜಿಲ್ಲೆಯಲ್ಲಿರುವ ಖಾಸಗಿ ಬಸ್, ಮಿನಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ವಿವರವನ್ನು ಪಡೆದುಕೊಂಡು ಟ್ರಿಪ್‌ಗಳ ವಿವರದೊಂದಿಗೆ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಿ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಇತರರಿದ್ದರು.