ಮಂಡ್ಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣದ ನೀಲ ನಕ್ಷೆಯನ್ನು ಶಾಸಕ ಪಿ.ರವಿಕುಮಾರ್ ಗಣಿಗ ವೀಕ್ಷಿಸಿದರು.
- ನಗರದಲ್ಲಿ ಅಧಿಕಾರಿಗಳೊಂದಿಗೆ ಸಭೆ
- ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನವನ್ನು ನವೀಕರಣಗೊಳಿಸುವ ಸಂಬಂಧ ಚರ್ಚೆ
ಮಂಡ್ಯ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ಗಣಿಗ ಹೇಳಿದರು.
ನಗರದ ಕಾವೇರಿ ನೀರಾವರಿ ನಿಗಮದಲ್ಲಿನ ಶಾಸಕರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೂರು ಕೋಟಿ ರೂ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು. ಇದರ ಕಾಮಗಾರಿಯ ಹೊಣೆಯನ್ನು ದೆಹಲಿ ಮೂಲದ ಗುತ್ತಿಗೆ ಕಂಪನಿಗೆ ನೀಡಲಾಗುವುದು. ಈ ಕಂಪನಿ ಹಲವು ಗುಣಮಟ್ಟದ ಕ್ರೀಡಾಂಗಣ ಮಾಡಿದ್ದಾರೆ. ಮೂಲ ಸೌಲಭ್ಯವುಳ್ಳ ಸ್ಟೇಡಿಯಂ ಮಾಡಲಾಗುವುದು ಎಂದರು.
ಮುಖ್ಯಮಂತ್ರಿ ಅವರ ವಿಶೇಷ ಅನುದಾನದಲ್ಲಿ ಈ ಕಾಮಗಾರಿ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ದಿನಾಂಕ ಕೊಟ್ಟ ನಂತರ ಭೂಮಿ ಪೂಜೆ ನೆರವೇರಿಸಲಾಗುವುದು. ಆ ಕಾರ್ಯಕ್ರಮಕ್ಕೆ ಕನಿಷ್ಟ 10 ಸಾವಿರ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಒಟ್ಟಾರೆ ಬ್ಯಾಸ್ಕೆಟ್‌ಬಾಲ್ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣ ಮಾಡಲಾಗುವುದು ಎಂದು ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯದಲ್ಲಿ ಸ್ಥಗಿತಗೊಂಡಿದ್ದ ಒಳಾಂಗಣ ಕ್ರೀಡಾಂಗಣದ ಅಭಿವೃದ್ಧಿಗೂ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಎರಡು ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಕಾಮಗಾರಿಗೂ ಶೀಘ್ರವೇ ಚಾಲನೆ ನೀಡಲಾಗುವುದು. ಈ ಕೆಲಸ ಪೂರ್ಣಗೊಂಡರೆ ವಿಶ್ವವಿದ್ಯಾಲಯದಲ್ಲಿನ ಸಾವಿರಾರೂ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್, ಕೆಆರ್‌ಐಡಿಎಲ್ ಇಇ ಸೋಮಶೇಖರ್ ಇತರರಿದ್ದರು.
ಶೀಘ್ರವೇ ತಮಿಳುನಾಡು ಪ್ರವಾಸ
ತಾಲೂಕಿನ ಕೆರಗೋಡು ಗ್ರಾಮದ ಪುರಾಣ ಪ್ರಸಿದ್ಧ ಪಂಚಲಿಂಗೇಶ್ವರಸ್ವಾಮಿ ದೇವಸ್ಥಾನವನ್ನು ನವೀಕರಣಗೊಳಿಸುವ ಸಂಬಂಧ ಈಗಾಗಲೇ ತೀರ್ಮಾನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಂದಾಜು ವೆಚ್ಚ ಹಾಗೂ ಕಾಮಗಾರಿ ವಿವರ ಸಿದ್ಧಪಡಿಸುವಂತೆ ಶಾಸಕ ಪಿ.ರವಿಕುಮಾರ್ ಗಣಿಗ ಸೂಚಿಸಿದರು.
ಈ ಕುರಿತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಲ್ಕು ಕೋಟಿ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಮಾದರಿಯ ನೀಲ ನಕ್ಷೆ ಸಿದ್ಧಪಡಿಸಲಾಗಿದೆ. ಆದರೂ ಗ್ರಾಮದ ಮುಖಂಡರನ್ನು ತಮಿಳುನಾಡಿಗೆ ಪ್ರವಾಸ ಕಳುಹಿಸಲಾಗುವುದು. ಅಲ್ಲಿ ವಿವಿಧ ದೇವಸ್ಥಾನ ವೀಕ್ಷಣೆ ಮಾಡಿಕೊಂಡು ಬಂದ ನಂತರ ಅವರ ಇಚ್ಚೆಪಟ್ಟಂತೆಯೇ ನವೀಕರಣ ಮಾಡಬೇಕೆನ್ನುವ ನಿರ್ಧಾರ ಮಾಡಲಾಗಿದೆ. ಅಂತೆಯೇ ನೂರು ಜನ ಮಠಾಧೀಶರು ಹಾಗೂ 25 ಸಾವಿರ ಜನರನ್ನು ಸೇರಿಸಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ವಿವರಿಸಿದರು.
ಎಂಪಿಎಲ್ ಕ್ರಿಕೆಟ್ ಆಯೋಜನೆ ಚರ್ಚೆ
ಮಂಡ್ಯ ವಿಧಾನಸಭಾ ಕ್ಷೇತ್ರದ ಕ್ರಿಕೆಟ್ ಆಟಗಾರರಿಗಾಗಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಾದರಿ ಆರ್‌ಕೆಜಿ ಕಪ್ ಆಯೋಜಿಸಲಾಗುತ್ತಿದೆ. ಈ ಸಂಬಂಧ ಬುಧವಾರ ವಿವಿಧ ಕ್ರೀಡಾ ಆಯೋಜಕರೊಂದಿಗೆ ಪೂರ್ವಭಾವಿ ಸಭೆ ನಡೆಯಿತು. ಅಂತೆಯೇ ಸಭೆಯಲ್ಲಿ ಸಲಹೆ ಪಡೆಯಲಾಯಿತು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ 28 ಗ್ರಾಮ ಪಂಚಾಯಿತಿ, ನಗರ ಪ್ರದೇಶದ 35 ವಾರ್ಡ್ ಹಾಗೂ 3 ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದ ಪಂದ್ಯಾವಳಿಗಳನ್ನು ನಡೆಸಲಾಗುವುದು. ಅಲ್ಲಿಂದ ಆಯ್ಕೆಯಾಗುವ ಅತ್ಯುತ್ತಮ ತಂಡಗಳು ತಾಲೂಕು ಮಟ್ಟದ ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಗೆ 200ಕ್ಕೂ ಹೆಚ್ಚು ತಂಡಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರತಿ ತಂಡದ 15 ಆಟಗಾರರಿಗೆ ಉಚಿತ ಟಿ-ಶರ್ಟ್, ಬ್ಯಾಟ್ ಹಾಗೂ ಬಾಲ್ ವಿತರಣೆ ಮಾಡಲಾಗುವುದು. ವಿಜೇತ ತಂಡಕ್ಕೆ ಕಾರು, ಬೈಕ್ ಸೇರಿದಂತೆ ಭರ್ಜರಿ ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.