ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.
- ಜಿಲ್ಲೆಯಲ್ಲಿ 203 ಕೆರೆಗಳ ತೆರವು ಬಾಕಿ
- ಟ್ರಂಚ್‌ಗಳನ್ನು(ಕಂದಕ) ನಿರ್ಮಿಸಿ, ನಾಮಫಲಕ ಅಳವಡಿಸಿ
ಮಂಡ್ಯ: ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ಮತ್ತು ಜವಾಬ್ದಾರಿ ತೆಗೆದುಕೊಂಡು ಕೆರೆ ಒತ್ತುವರಿ ತೆರವುಗೊಳಿಸಬೇಕು. ಮಾತ್ರವಲ್ಲದೆ ಮತ್ತೆ ಒತ್ತುವರಿ ಮಾಡದಂತೆ ಸಂರಕ್ಷಣೆ ಮಾಡಬೇಕು. ಜತೆಗೆ ಒತ್ತುವರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದುವರೆಗೆ ಸುಮಾರು 245 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇನ್ನು 203 ಕೆರೆಗಳ ತೆರವು ಬಾಕಿ ಉಳಿದಿದೆ. ಬಾಕಿ ಇರುವ ಕೆರೆ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು.
ಪ್ರತಿ ತಿಂಗಳು ಕೆರೆ ಒತ್ತುವರಿ ಸಂಬಂಧ ಸಭೆ ನಡೆಸಲಾಗುತ್ತಿದ್ದು, ಮಾ.30ರೊಳಗೆ ಬಾಕಿ ಇರುವ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ತೆರವುಗೊಳಿಸಿದ ಕೆರೆಗಳ ಸುತ್ತ ಟ್ರಂಚ್‌ಗಳನ್ನು(ಕಂದಕ) ನಿರ್ಮಿಸಿ, ನಾಮಫಲಕಗಳನ್ನು ಅಳವಡಿಸುವ ಮೂಲಕ ಮರು ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಎಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು. ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ಡಿಡಿಎಲ್ಆರ್ ವಿರೂಪಾಕ್ಷ ಸೇರಿದಂತೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.