ಪಾಂಡವಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.
- ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ
- ಡಿಸಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಭಾಗಿ
ಪಾಂಡವಪುರ: ರಾಜ್ಯಸರ್ಕಾರ ಪಾಂಡವಪುರವನ್ನು ಸಾವಯವ ತಾಲೂಕಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಮೇಲುಕೋಟೆ ಹೋಬಳಿಯನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿರುತ್ತದೆ.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯ ಸಾವಯವ ತಾಲೂಕು ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು. ರಾಜ್ಯ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ ಪಾಂಡವಪುರವನ್ನು ಸಾವಯವ ತಾಲೂಕು ಎಂದು ಘೋಷಿಸಿರುವುದು ಕೃಷಿ ಕ್ಷೇತ್ರದ ದೀರ್ಘಕಾಲೀನ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ಈ ಘೋಷಣೆಯಿಂದ ರೈತರ ಆದಾಯ ವೃದ್ಧಿ, ಮಣ್ಣಿನ ಆರೋಗ್ಯ ಸಂರಕ್ಷಣೆ, ಪರಿಸರ ಸಮತೋಲನ ಹಾಗೂ ವಿಷರಹಿತ ಆಹಾರ ಉತ್ಪಾದನೆಗೆ ಉತ್ತೇಜನ ದೊರೆಯಲಿದೆ. ಈ ನಿಟ್ಟಿನಲ್ಲಿ ಪಾಂಡವಪುರ ತಾಲೂಕನ್ನು ಮಾದರಿ ಸಾವಯವ ಕೃಷಿ ಪ್ರದೇಶವನ್ನಾಗಿ ರೂಪಿಸುವ ಮೂಲಕ ರಾಜ್ಯದ ಇತರೆ ಭಾಗಗಳಿಗೂ ಪ್ರೇರಣೆಯಾಗುವಂತೆ ಸಮಗ್ರ ಯೋಜನೆ ಜಾರಿಗೊಳಸುವುದು ಸರ್ಕಾರದ ಆಶಯವಾಗಿದೆ.
ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಲವು ಪೂರಕ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ಸಂಬಂಧ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅದರಂತೆ ಇಡೀ ದೇಶದಲ್ಲಿ ಕೃಷಿಯಲ್ಲಿ ರಸಗೊಬ್ಬರವನ್ನು ಅತೀ ಹೆಚ್ಚಾಗಿ ಬಳಸುತ್ತಿರುವುದರಿಂದ ಆಹಾರದ ಗುಣಮಟ್ಟ ಕಳಪೆಯಾಗುವುದರ ಜತೆಗೆ ಮಣ್ಣಿನ ಉತ್ಪಾದನಾ ಸಾಮರ್ಥವ್ಯೆ ಕಡಿಮೆಯಾಗುತ್ತಿದೆ. ರಾಸಾಯನಿಕಗಳ ಹೆಚ್ಚಿನ ಬಳಕೆಯಿಂದಾಗಿ ಆಹಾರದ ಗುಣಮಟ್ಟದ ಸಾರ ಪುಷ್ಟೀಕರವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ರಾಜ್ಯದಲ್ಲಿಯೇ ಎರಡನೇ ತಾಲೂಕನ್ನಾಗಿ ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಎಂದು ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿನ ಕೃಷಿ ಅಭಿವೃದ್ಧಿಗೆ ಮೆಟ್ಟಿಲಾಗಿದೆ. ಅದರಂತೆ ಪಾಂಡವಪುರ ತಾಲೂಕನ್ನಾಗಿ ಪರಿವರ್ತನೆ ಮಾಡಬೇಕಾಗಿರುವುದು ಮುಂದಿರುವ ಜವಾಬ್ದಾರಿಯಾಗಿರುತ್ತದೆ ಎಂಬುದರ ಚರ್ಚೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಉಪವಿಭಾಗಾಧಿಕಾರಿ ಎಂ.ಶ್ರೀನಿವಾಸ್, ತಹಸೀಲ್ದಾರ್ ಬಸವ ರೆಡ್ಡಪ್ಪ ರೋಣದ, ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಇತರರಿದ್ದರು.
ರೈತರಿಂದ ಅಭಿಪ್ರಾಯ ಸಂಗ್ರಹ
ಯೋಜನೆಗೆ ಪೂರಕವಾಗಿ ಜಿಲ್ಲಾಡಳಿತದೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಕೆಲ ಸಲಹೆ ನೀಡಲಾಯಿತು. ಅದರಂತೆ ಏಕ ಕಾಲದಲ್ಲಿ 5,000 ರೈತರೊಂದಿಗೆ ಗ್ರೂಪ್ ಕಾಲ್ ಮಾಡಿ ಹಾಗೂ ಗ್ರಾಮ ಸಹಾಯಕರ ಮೂಲಕ ರೈತರ ಅಭಿಪ್ರಾಯವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಪಾಂಡವಪುರ ತಾಲೂಕಿನಲ್ಲಿ ಮೇಲುಕೋಟೆ ಹೋಬಳಿಯನ್ನು ಪ್ರಾಯೋಗಿಕ ಹೋಬಳಿಯನ್ನಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿರುತ್ತದೆ. ನಮ್ಮ ರಾಜ್ಯದ ಬಹುಪಾಲು ಬಜೆಟ್ ಅನ್ನು ರಸಗೊಬ್ಬರಗಳಿಗೆ ಮೀಸಲಿರಿಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯುದ್ಧದಂತಹ ಸಂದಿಗ್ಧ ಮುಗ್ಗಟ್ಟು ಪರಿಸ್ಥಿತಿಯಲ್ಲಿ ಸಾವಯವ ತಾಲೂಕು ಎಂಬ ಯೋಜನೆಯನ್ನು ಜಾರಿಗೆ ತಂದಿರುವುದು ಆರ್ಥಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಗೆ ಸಹಕಾರಿಯಾಗಿರುತ್ತದೆ.
ಆದ್ದರಿಂದ ಯೋಜನೆಯ ಸಮರ್ಪಕ ಅನುಷ್ಟಾನದ ನಿಟ್ಟಿನಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಹಾಗೂ ಪೂರಕವಾಗಿ ರೈತರು ಯೋಜನೆಯ ಅನುಷ್ಟಾನಕ್ಕಾಗಿ ಸಹಕರಿಸಬೇಕು ಎಂದು ಹಾಜರಿದ್ದ ಅಧಿಕಾರಿ ಹಾಗೂ ರೈತ ಸಂಘದ ಮುಖಂಡರುಗಳಿಗೆ ಸೂಚಿಸಲಾಯಿತು. ಅಂತೆಯೇ ತಾಲೂಕಿನ ರಂಗೇನಹಳ್ಳಿ, ಎಂ.ಶೆಟ್ಟಹಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿನ ಅರಣ್ಯ ಇಲಾಖೆಯ ಜಮೀನನ್ನು ಹೊರತುಪಡಿಸಿ ಉಳಿಕೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸುವಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಹಾಜರಿದ್ದ ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕಟಾವಿಗೆ ಬಾಡಿಗೆ ದರ ನಿಗದಿ
ಜಿಲ್ಲೆಯಲ್ಲಿ ಭತ್ತ ಮತ್ತು ರಾಗಿ ಕಟಾವು ಯಂತ್ರಕ್ಕೆ ದರ ನಿಗದಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಪ್ರತಿ ಬಾರಿಯೂ ಕಟಾವು ಸಮಯದಲ್ಲಿ ಎಗ್ಗಿಲ್ಲದೆ ರೈತರಿಂದ ಹಣವನ್ನು ಪಡೆಯುವ ಪರಿಪಾಠವಿದೆ. ಈ ಸಂಬಂಧ ದೂರು ಕೇಳಿಬರುತ್ತಿರುತ್ತದೆ. ಇದಕ್ಕೆ ಕಡಿವಾಣ ಹಾಕುವ ಮೂಲಕ ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ದರ ನಿಗದಿ ಬಗ್ಗೆ ಚರ್ಚಿಸಲಾಯಿತು. ಅದೇ ರೀತಿ ಪ್ರತಿ ಗಂಟೆಗೆ ದರ ನಿಗದಿಪಡಿಸಲಾಯಿತು. ಅದರಂತೆ ಚೈನ್/ಟ್ರಾಕ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,500 ರೂ, ಟೈಯರ್(ಗ್ರಿಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2000 ರೂ, ಟೈಯರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1,800 ರೂ ಹಾಗೂ ರಾಗಿ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,900 ರೂಪಾಯಿ ನಿಗದಿಪಡಿಸಲಾಗಿದೆ. ಸಭೆಯ ನಂತರದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.