ಮಂಡ್ಯ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.  
ಮಂಡ್ಯ

ಮಂಡ್ಯದಲ್ಲಿ ಅಂತಾರಾಷ್ಟ್ರೀಯ ಮಾದರಿ ಕ್ರಿಕೆಟ್: ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಆಯೋಜನೆ

ಪ್ರಮುಖ ಮುಖ್ಯಾಂಶಗಳು

  • ಪ್ರವಾಸಿಮಂದಿರದಲ್ಲಿ ಪೂರ್ವಭಾವಿ ಸಭೆ
  • ವಿಜೇತರಿಗೆ ಕಾರು, ಬೈಕ್ ಬಹುಮಾನ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಕ್ರಿಕೆಟ್ ಆಟಗಾರರಿಗಾಗಿ ಶಾಸಕ ಪಿ.ರವಿಕುಮಾರ್ ಗಣಿಗ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಾದರಿ ಆರ್‌ಕೆಜಿ ಕಪ್ ಆಯೋಜಿಸಲಾಗುತ್ತಿದೆ. ಈ ಸಂಬಂಧ ನಗರದ ಪ್ರವಾಸಿಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕ್ರಿಕೆಟ್ ಆಟಗಾರರು ಮತ್ತು ಆಯೋಜಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಸಲಹೆಗಳನ್ನು ಪಡೆಯಲಾಯಿತು. ಈ ವೇಳೆ ಮಾತನಾಡಿದ ಶಾಸಕ ಪಿ.ರವಿಕುಮಾರ್ ಗಣಿಗ, ಅಂತಾರಾಷ್ಟ್ರೀಯ ಪಂದ್ಯಾವಳಿ ಮಾದರಿಯಲ್ಲಿ ಈ ಟೂರ್ನಿಯನ್ನು ಅತ್ಯಂತ ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಕ್ರಿಕೆಟ್ ಪ್ರತಿಭೆಗಳಿಗೆ ದೊಡ್ಡ ವೇದಿಕೆ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ. ಕ್ರೀಡೆಯ ಮೂಲಕ ಯುವಜನರಲ್ಲಿ ಶಿಸ್ತು, ನಾಯಕತ್ವ ಹಾಗೂ ಸ್ನೇಹಭಾವ ಬೆಳೆಸುವ ಉದ್ದೇಶದಿಂದ ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ 28 ಗ್ರಾಮ ಪಂಚಾಯಿತಿ, ನಗರ ಪ್ರದೇಶದ 35 ವಾರ್ಡ್ ಹಾಗೂ 3 ಹೋಬಳಿ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದ ಪಂದ್ಯಾವಳಿಗಳನ್ನು ನಡೆಸಲಾಗುವುದು. ಅಲ್ಲಿಂದ ಆಯ್ಕೆಯಾಗುವ ಅತ್ಯುತ್ತಮ ತಂಡಗಳು ತಾಲೂಕು ಮಟ್ಟದ ಟೂರ್ನಿಯಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಗೆ 200ಕ್ಕೂ ಹೆಚ್ಚು ತಂಡಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರತಿ ತಂಡದ 15 ಆಟಗಾರರಿಗೆ ಉಚಿತ ಟಿ-ಶರ್ಟ್, ಬ್ಯಾಟ್ ಹಾಗೂ ಬಾಲ್ ವಿತರಣೆ ಮಾಡಲಾಗುವುದು. ಆಟಗಾರರು ಕಡ್ಡಾಯವಾಗಿ ತಮ್ಮ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ. ವಿಜೇತ ತಂಡಕ್ಕೆ ಕಾರು, ಬೈಕ್ ಸೇರಿದಂತೆ ಭರ್ಜರಿ ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ರಾಜಕೀಯ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪತ್ರಕರ್ತರ ತಂಡ ಒಂದು ಕಡೆ, ಕನ್ನಡ ಚಿತ್ರರಂಗದ ನಟರ ತಂಡ ಮತ್ತೊಂದು ಕಡೆ ಸ್ನೇಹಪೂರ್ವಕ ಪಂದ್ಯದಲ್ಲಿ ಭಾಗವಹಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಲಾಗುವುದು. ಮಹಿಳಾ ಕ್ರೀಡಾಪಟುಗಳಿಗೂ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ವಿಶೇಷ ವಿನ್ಯಾಸದ ಟ್ರೋಫಿಯನ್ನು ಕ್ಷೇತ್ರದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಕ್ರೀಡಾಸಕ್ತರಲ್ಲಿ ಉತ್ಸಾಹ ಮೂಡಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಮಾಜಿ ನಿರ್ದೇಶಕ ಕೃಷ್ಣ, ಮಾಜಿ ಅಧ್ಯಕ್ಷ ನಹೀಂ, ವಿನಯ್ ಜಾವಗಲ್ ಇತರರಿದ್ದರು.