ಮಂಡ್ಯ ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.
- ಸಾರ್ವಜನಿಕ ಕಟ್ಟಡಗಳ ಸುತ್ತ ಆವರಣ ಗೋಡೆ ನಿರ್ಮಿಸಬೇಕು
- ಎಲ್ಲೆಂದರಲ್ಲಿ ತಿನಿಸು ಪದಾರ್ಥಗಳನ್ನು ಎಸೆಯದಂತೆ ಅರಿವು ಮೂಡಿಸಿ
- ಆಶ್ರಯತಾಣಕ್ಕೆ ಸ್ಥಳಾಂತರಿಸಿ ರೇಬಿಸ್ ಲಸಿಕೆ ಹಾಕಿಸಿ
ಮಂಡ್ಯ: ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ನಗರ ಸ್ಧಳೀಯ ಸಂಸ್ಥೆಗಳಲ್ಲಿಯೂ ಬೀದಿ ನಾಯಿಗಳ ಉಪಟಳ ತಡೆಯಲು ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕ ಕಟ್ಟಡಗಳ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಬಸ್ ನಿಲ್ದಾಣದಲ್ಲಿ ಬೀದಿ ನಾಯಿಗಳು ಪ್ರವೇಶಿಸದಂತೆ, ಎಲ್ಲೆಂದರಲ್ಲಿ ತಿನಿಸು ಪದಾರ್ಥಗಳನ್ನು ಎಸೆಯದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಎಲ್ಲ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಸೂಕ್ತ ಆಶ್ರಯತಾಣಕ್ಕೆ ಸ್ಥಳಾಂತರಿಸಿ ರೇಬಿಸ್ ಲಸಿಕೆಗಳನ್ನು ಹಾಕಬೇಕಾಗುತ್ತದೆ. ಈ ಸಂಬಂಧ ಅಗತ್ಯ ಕ್ರಮ ವಹಿಸಬೇಕು. ಪ್ರತಿ ತಾಲೂಕಿನ ಸ್ಧಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಒಂದರಂತೆ ಒಟ್ಟು 8 ಆಶ್ರಯ ತಾಣಗಳನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಶಾಲಾ, ಕಾಲೇಜು, ಬಸ್‌ನಿಲ್ದಾಣ, ಆಸ್ಪತ್ರೆ ಆವರಣದಲ್ಲಿ 190 ಬೀದಿ ನಾಯಿಗಳನ್ನು ಗುರುತಿಸಲಾಗಿದ್ದು, ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಮುಂದಿನ ದಿನಗಳಲ್ಲಿ ಆಶ್ರಯತಾಣಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮವಹಿಸಿ. ಆಹಾರದ ತ್ಯಾಜ್ಯಗಳು ನಾಯಿಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ಕಸದ ಡಬ್ಬಿಗಳನ್ನು ಮುಚ್ಚಿಡಿ ಮತ್ತು ತ್ಯಾಜ್ಯವನ್ನು ಪ್ರತಿದಿನ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಶಿವಲಿಂಗಯ್ಯ, ಪೌರಾಯುಕ್ತೆ ಪಂಪಾಶ್ರೀ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.