ಮಂಡ್ಯ ನಗರದ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾಹಿತಿಗಳು, ಸಂಘಟಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
- ಅಭಿಪ್ರಾಯ ಮಂಡಿಸಿದ ಸಾಹಿತಿ, ಸಂಘಟಕರು
ಮಂಡ್ಯ: ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಬಂಧ ಚರ್ಚಿಸಲು ಹಾಗೂ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು.
ಸಾಹಿತಿಗಳು, ಸಂಘಟಕರು, ಸಂಘಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಭಿಪ್ರಾಯ ಮಂಡಿಸಿದರು. ಬಹುಮುಖ್ಯವಾಗಿ ರವೀಂದ್ರನಾಥ ಟ್ಯಾಗೋರ್ ಕಟ್ಟಿದ ಶಾಂತಿನಿಕೇತನದ ಮಾದರಿಯಲ್ಲಿ ಮಂಡ್ಯ ನಗರದಲ್ಲೊಂದು ಸಾಂಸ್ಕೃತಿಕ ಕೇಂದ್ರ(ಹಸಿರು ಕ್ಯಾಂಪಸ್) ನಿರ್ಮಾಣ ಸೇರಿದಂತೆ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹತ್ತಾರು ಅಂಶಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಆಗಬೇಕಿರುವ ಪ್ರಮುಖ ಸಂಗತಿಗಳನ್ನು ಪ್ರಸ್ತಾಪಿಸಿದರು. ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ಮಾರಕಗಳ ಸಂರಕ್ಷಣೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಗ್ಗೆಯೂ ಹಕ್ಕೊತ್ತಾಯ ಮಂಡಿಸಿದರು. ಸಭೆ, ಸಮಾರಂಭಕ್ಕೆ ಕಲಾಮಂದಿರ, ಬಯಲು ರಂಗಮಂದಿರ, ಮ್ಯೂಸಿಯಂ, ಥೀಮ್‌ಪಾರ್ಕ್, ಮಂಡ್ಯ ಜಿಲ್ಲೆಯ ಅಸ್ಮಿತೆ ಪ್ರತಿನಿಧಿಸುವ ತಾಣ ನಿರ್ಮಾಣ, ಶಿವಪುರ ಧ್ವಜಸತ್ಯಾಗ್ರಹಸೌಧ ಅಭಿವೃದ್ಧಿ, ಮಂಟೇಸ್ವಾಮಿ ಕಾರ್ಯಕ್ಷೇತ್ರಗಳಿಗೆ ಕಾಯಕಲ್ಪ, ಜಿಲ್ಲೆಯ ಸಂಸ್ಕೃತಿ, ಸಾಂಸ್ಕೃತಿಕತೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಸ್ಮಾರಕಗಳು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಸೇರಿದಂತೆ ಹಲವು ವಿಷಯದ ಬಗ್ಗೆ ಚರ್ಚೆ ನಡೆಯಿತು.
ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಜಿಲ್ಲೆಯ ಸಾಹಿತ್ಯ-ಸಾಂಸ್ಕೃತಿಕ ಅಭಿವೃದ್ಧಿ ಸಂಬಂಧ ಈಗಾಗಲೇ ಎರಡು ಸಭೆಗಳನ್ನು ನಡೆಸಲಾಗಿದೆ. ಇಂದಿನದು 3ನೇ ಸಭೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮಿಜಿ ಅವರ ಮೂಲಕ ಸರಕಾರದ ಮುಂದಿಡಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಸಾಹಿತ್ಯ, ಸಂಸ್ಕೃತಿ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಆಗಬೇಕಿರುವ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ನಾವೆಲ್ಲರೂ ಸಂಘಟಿತರಾಗಿ ಸರ್ಕಾರವನ್ನು ಒತ್ತಾಯಿಸುವ ನಿರ್ಣಯಕ್ಕೆ ಬರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರನ್ನು ಒಂದೇ ವೇದಿಕೆಯಡಿ ಸೇರಿಸಿ ಸಾಧ್ಯವಾದಷ್ಟು ಕೆಲಸಗಳು ಆಗುವಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಪ್ರೊ.ಜಿ.ಟಿ.ವೀರಪ್ಪ, ಡಿ.ಪಿ.ಸ್ವಾಮಿ, ಪರಿಸರ ಪ್ರೇಮಿ ಕೆ.ಟಿ.ಹನುಮಂತು, ನಿವೃತ್ತ ಬಿಇಒ ಚಿಕ್ಕಸ್ವಾಮಿ, ಉಪನ್ಯಾಸಕ ಅನಿಲ್‌ಬಾಬು, ಮುಖ್ಯಶಿಕ್ಷಕ ಎಚ್.ಎನ್.ದೇವರಾಜು, ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ, ಸ್ಯಾಕ್ಸೋಫೋನ್ ವಾದಕ ಎಂ.ಎನ್.ಪಿ.ರತ್ನಂ, ಕಸಾಪ ಪ್ರತಿನಿಧಿ ಪಣ್ಣೆದೊಡ್ಡಿ ಹರ್ಷ, ಕವಯಿತ್ರಿಯರಾದ ಡಾ.ಶುಭಶ್ರೀ ಪ್ರಸಾದ್, ಭವಾನಿ ಲೋಕೇಶ್, ಉಪನ್ಯಾಸಕ ಮಂಗಲ ಅನಿತಾ, ಸಂಘಟಕ ಅರವಿಂದ ಪ್ರಭು ಇತರರಿದ್ದರು.
ಸಭೆಯಲ್ಲಿ ತೆಗೆದುಕೊಂಡು ನಿರ್ಣಯ
* ಮಂಡ್ಯ ನಗರದಲ್ಲಿ ಸಾಂಸ್ಕೃತಿಕ ಕೇಂದ್ರ(ಹಸಿರು ಕ್ಯಾಂಪಸ್) ನಿರ್ಮಾಣವಾಗಬೇಕು.
* ಮೈಸೂರಿನ ರಂಗಾಯಣ ರೂಪದ ಆಡಿಟೋರಿಯಮ್ ಬಯಲು ರಂಗಮಂದಿರ ಮಂಡ್ಯದಲ್ಲಿಯೂ ಆಗಬೇಕು.
* ದೆಹಲಿಯ ಜೆಎನ್‌ಯು ಮಾದರಿಯಲ್ಲಿ ಬೌದ್ಧಿಕ ವಿಚಾರ ಚರ್ಚೆಗಳು ದಿನವಿಡೀ ನಡೆಯುವಂತೆ ಮಂಡ್ಯದಲ್ಲಿ ಮುಕ್ತ ವಾತಾವರಣ ಸೃಷ್ಟಿಸಬೇಕು.
* ಚಿತ್ರಕಲೆ, ನಾಟಕ, ಸಂಗೀತ ಶಾಲೆ, ನೃತ್ಯ ಮಂಟಪ, ಬೌದ್ಧಿಕ ವಿಚಾರ ಕೂಟ, ತಾವರೆಯ ಹೂ ತುಂಬಿದ ಪುಟ್ಟ ಕೊಳ. ಕಣ್ಮನ ತಣಿಸುವ ಉದ್ಯಾನವನಗಳು ಈ ಎಲ್ಲವೂ ಒಂದೇ ಕ್ಯಾಂಪಸ್‌ನಲ್ಲಿ ಸಿಗುವಂತಾಗಬೇಕು.