ಮಂಡ್ಯ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿತ್ತು.
- ನಗರದ ಪ್ರವಾಸಿಮಂದಿರದಲ್ಲಿ ಸಭೆ
- ವಿವಿಧ ವಿಷಯಗಳ ಬಗ್ಗೆ ಚರ್ಚೆ
ಮಂಡ್ಯ: ಮೈಶುಗರ್ ಕಾರ್ಖಾನೆ ಪ್ರಾರಂಭ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದ ಪ್ರವಾಸಿಮಂದಿರದಲ್ಲಿ ಸಭೆ ಆಯೋಜಿಸಲಾಗಿತ್ತು.
ಮೈಶುಗರ್‌ನಲ್ಲಿ ಕೂಡಲೇ ಕಬ್ಬು ಅರೆಯಲು ಪ್ರಾರಂಭಿಸಬೇಕು. ಕಾರ್ಖಾನೆ ಸಂಬಂಧ ಸಾರ್ವಜನಿಕ ದೂರುಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಬಾಯ್ಲಿಂಗ್ ಹೌಸ್ ಸಂಬಂಧ ಕ್ರಮ ಕೈಗೊಂಡಿರುವ ಬಗ್ಗೆ ಆಡಳಿತ ಮಂಡಳಿಯು ಸಾರ್ವಜನಿಕರಿಗೆ ಮತ್ತು ಕಬ್ಬು ಬೆಳೆಗಾರರಿಗೆ ಮಾಹಿತಿ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಅಂತೆಯೇ ಕೆಆರ್‌ಎಸ್ ಅಣೆಕಟ್ಟೆಯ ಬಳಿ ಪ್ರವಾಸೋದ್ಯಮ ಯೋಜನೆಗಳನ್ನು ಕೈಬಿಡಬೇಕು ಹಾಗೂ ಕೃಷಿಗೆ ಬಳಸಿಕೊಳ್ಳಬೇಕಿರುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದು ಸೇರಿದಂತೆ ಹಲವು ಚರ್ಚೆಗಳು ನಡೆದವು. ಮಾತ್ರವಲ್ಲದೆ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
2025-26ನೇ ಸಾಲಿನ ಸರ್ಕಾರ ಪ್ರಕಟಿಸಿರುವ ಕಬ್ಬಿನ ಬಾಕಿ 100 ರೂಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಸ್ಥಳೀಯ ಶಾಸಕರು ಹಾಗೂ ಕಾರ್ಖಾನೆಯ ಆಗು ಹೋಗುಗಳ ಬಗ್ಗೆ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಹಾಗೂ ಕಬ್ಬು ಬೆಳೆಗಾರರ ಸಭೆ ನಡೆಸಬೇಕು. 2021ರಿಂದ 2025ರವರೆಗೆ ಸರ್ಕಾರ ರಚಿಸಿದ್ದ ತನಿಖಾ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ಜಿ.ಬಿ.ಶಿವಕುಮಾರ್ ಮಾತನಾಡಿ, ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ರೈತರ ಹಿತದೃಷ್ಟಿಯಿಂದ ಸಮಿತಿ ಆರಂಭವಾಗಿದ್ದು, ಎಲ್ಲರೂ ಪಕ್ಷಾತೀತವಾಗಿ ಹಾಗೂ ಸಂಘಟನೆಗಳು ಬೆಂಬಲ ನೀಡುವ ಮೂಲಕ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು.ಜತೆಗೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡೋಣ ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆಯ ನೀರು ಕೃಷಿ ಬಳಕೆಗೆ ಮೀಸಲಾದದ್ದು. ಅಣೆಕಟ್ಟೆಯಿಂದ ಬೆಂಗಳೂರಿಗೆ ನೀರು ಒದಗಿಸುವ ಎಲ್ಲ ಹಂತಗಳ ಯೋಜನೆಗಳನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಲಭ್ಯತೆಯಿರುವ ನೀರಿನ ಬಗ್ಗೆ ಸರ್ಕಾರ ಗಮನಿಸಿ ಬೆಳೆಗಳಿಗೆ ನೀರು ಹರಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಅಣೆಕಟ್ಟೆ ಸುರಕ್ಷತೆಯಿಂದ ಅಣೆಕಟ್ಟೆ ಬಳಿ ಯಾವುದೇ ಪ್ರವಾಸೋದ್ಯಮ ಯೋಜನೆಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಸಭೆಯಲ್ಲಿದ್ದ ಮುಖಂಡರು ಧ್ವನಿಗೂಡಿಸಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿಗಳಾದ ಎಸ್.ನಾರಾಯಣ್, ಎಚ್.ಸಿ.ಮಂಜುನಾಥ್, ಎಸ್.ಎಂ.ವೇಣುಗೋಪಾಲ್, ಇಂಡುವಾಳು ಚಂದ್ರಶೇಖರ್, ಖಜಾಂಚಿ ಮುದ್ದೇಗೌಡ, ಸದಸ್ಯರಾದ ಅಂಬುಜಮ್ಮ, ಮಳವಳ್ಳಿ ಮಹೇಶ್, ಪ್ರಭುಲಿಂಗ ಭಾಗವಹಿಸಿದ್ದರು.