ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕೋಕಿಲಾ ಅರುಣ್ ಮಾತನಾಡಿದರು. ಟಿ.ಆರ್.ಪ್ರಸನ್ನಕುಮಾರ್, ವನಿತಾ, ಎಂ.ಬಿ.ಸಚಿನ್, ಸಿದ್ದರಾಜು, ಬಸವರಾಜು, ಎಂ.ಡಿ.ಮಹಾಲಿಂಗಯ್ಯ ಇದ್ದರು.
ಮದ್ದೂರು: ಮದ್ದೂರು ಪುರಸಭೆ ನಗರಸಭೆಯಾಗುವುದರಿಂದ ಸಾಕಷ್ಟು ಅಭಿವೃದ್ಧಿಯಾಗಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಸಕ ಕೆ.ಎಂ.ಉದಯ್ ಅವರ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನದಿಂದಾಗಿ ಮದ್ದೂರು ಪುರಸಭೆಯನ್ನು ಅಭಿವೃದ್ಧಿ ದೃಷ್ಟಿಯಿಂದ ನಗರಸಭೆ ಮಾಡಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೈತನ ಪುತ್ರರಾದ ಕೆ.ಎಂ.ಉದಯ್ ಅವರು ಶಾಸಕರಾದ ಎರಡೇ ವರ್ಷಗಳಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಸುಮಾರು 1,800 ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದಿದ್ದಾರೆ. ನಗರದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಕೆಮ್ಮಣ್ಣು ನಾಲೆ ಆಧುನೀಕರಣ, 700 ಕೋಟಿ ರೂ.ವೆಚ್ಚದಲ್ಲಿ ತಾಲೂಕಿನಲ್ಲಿ ವಿವಿಧ ನೀರಾವರಿ ಯೋಜನೆಗಳು, ನಗರದಲ್ಲಿ 200 ಕೋಟಿ ರೂ.ವೆಚ್ಚದಲ್ಲಿ ಪೇಟೆಬೀದಿ ರಸ್ತೆ ವಿಸ್ತರಣೆ ಕಾರ್ಯಕ್ಕೆ ಮುಂದಾಗಿದ್ದಾರೆ. ನಗರದ ಪ್ರತಿ ವಾರ್ಡ್‌ನ ಅಭಿವೃದ್ಧಿಗೂ ಹೆಚ್ಚಿನ ಒತ್ತು ಸೇರಿದಂತೆ ತಾಲೂಕಿನಲ್ಲಿ ನೀರಾವರಿ, ಶಿಕ್ಷಣ, ರಸ್ತೆ, ಚರಂಡಿ ಸೇರಿದಂತೆ ತಾಲೂಕಿನಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷ ಆದ್ಯತೆ ನೀಡುವ ಮೂಲಕ ಹಿಂದೆಂದೂ ನಡೆಯದ ರೀತಿಯಲ್ಲಿ ತಾಲೂಕಿನಲ್ಲಿ ಶಾಶ್ವತ ಕಾಮಗಾರಿಗಳ ಅಭಿವೃದ್ಧಿ ಪರ್ವ ಶುರುವಾಗಿದೆ ಎಂದರು.
ಮದ್ದೂರು ಪುರಸಭೆ ನಗರಸಭೆಯಾಗುವ ಸಂಬಂಧ ಶಾಸಕರು ಪುರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರಿಂದ ಒಪ್ಪಿಗೆ ಪಡೆದ ನಂತರ ಸರ್ಕಾರದಿಂದ ಅನುಮೋದನೆ ಪಡೆದು ನಗರಸಭೆಯನ್ನಾಗಿ ಮಾಡಿಸಿದ್ದಾರೆ. ಶಾಸಕರು ಈ ಸಂಬಂಧ ಏಕಾಏಕಿ ನಿರ್ಧಾರ ಕೈಗೊಂಡಿಲ್ಲ ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನ ಕುಮಾರ್ ಮಾತನಾಡಿ, ನಗರಸಭೆಯಾದರೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದು ನಗರದ ಸಮಗ್ರ ಅಭಿವೃದ್ಧಿಯಾಗುತ್ತದೆ. ಇದರಿಂದ ಮದ್ದೂರು ಹಾಗೂ ನಗರಸಭೆಗೆ ಒಳಪಡುವ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಆದ್ದರಿಂದ ನಗರಸಭೆಯಾಗಲು ಎಲ್ಲರೂ ಕೈ ಜೋಡಿಸಬೇಕು ಎಂದರು.
ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ವನಿತಾ, ಮಾಜಿ ಸದಸ್ಯರಾದ ಎಂ.ಬಿ.ಸಚಿನ್, ಸಿದ್ದರಾಜು, ಬಸವರಾಜು, ಮುಖಂಡರಾದ ಅರುಣ್, ಎಂ.ಡಿ.ಮಹಾಲಿಂಗಯ್ಯ, ರಘು, ಮಹೇಶ್ ಇದ್ದರು.