ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ
ಮಂಡ್ಯ: ಜಿಲ್ಲೆಯಲ್ಲಿ ಬೆಳೆಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ವಹಿಸಲಾಗುವುದು ಎಂದು ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆ ಕಟ್ಟೆ, ಕುಡಿಯುವ ನೀರಿಗೆ ತೊಂದರೆ ಆಗಲ್ಲ. ನಾವು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತೇವೆ. ಆದ್ದರಿಂದ ರೈತರು ಆತಂಕಪಡುವ ಅವಶ್ಯಕತೆ ಇಲ್ಲ. ಕೆಆರ್‌ಎಸ್ ಡ್ಯಾಂ ನಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲದ ರೀತಿ ನೋಡಿಕೊಳ್ಳುತ್ತಿದ್ದೇವೆ. ಈ ಸಂಬಂಧ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದೆ. ಅಂತೆಯೇ ಸಭೆಯಲ್ಲಿ ರೈತರಿಗೆ ತೊಂದರೆ ಆಗದ ರೀತಿ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಮಳೆ ಬರದಿದ್ದರೆ ಏನು ಮಾಡಲು ಸಾಧ್ಯವಿಲ್ಲ. ರೈತರ ಬೆಳೆಗೆ ನೀರು ತಲುಪಿಸುವ ಕೆಲಸ ಮಾಡುತ್ತೇವೆ. ಎನ್‌ಡಿಆರ್‌ಎಫ್‌ನಲ್ಲಿ ಪರಿಹಾರ ಕೊಡುವ ಕ್ರಮ ಆಗುತ್ತದೆ. ಬರಗಾಲ ಬರುವುದು ಸಹಜ, ನಾವು ಎಚ್ಚರಿಕೆ ವಹಿಸಿದ್ದೇವೆ ಎಂದರು. ಅಂತೆಯೇ ಕೆಆರ್‌ಎಸ್ ಡ್ಯಾಂನಿಂದ ಬೆಂಗಳೂರಿಗೆ 6ನೇ ಹಂತದ ಕುಡಿಯು ನೀರಿನ ಯೋಜನೆ ವಿರೋಧಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಭಟನೆ ಮಾಡಲಿ ಬಿಡಿ ಎಂದು ಹೇಳಿದರು.
ಕಾಂಗ್ರೆಸ್ ಶಾಸಕರ ಮೇಲೆ ಇಡಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಟ್ ಕಾಯಿನ್ ಪ್ರಕರಣ ಸಂಬಂಧ ದಾಳಿ ಆಗಿದೆ. ಇದನ್ನು ರಾಜಕೀಯ ದುರುದ್ದೇಶ ಇಟ್ಟುಕೊಂಡು ಮಾಡಿದ್ದಾರೆ. ಇನ್ನು ಸಚಿವ ಜಮೀರ್ ಅಹಮದ್ ಕಾಂಗ್ರೆಸ್ ಬಿಟ್ಟು ಹೋಗಲ್ಲ. ಅದೆಲ್ಲ ಊಹಾಪೋಹಗಳು ಎಂದು ಸ್ಪಷ್ಟಪಡಿಸಿದರು.