ಕೆ.ಎಂ.ದೊಡ್ಡಿ ಸಮೀಪದ ಮಠದ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನೀಲಗಾರರ ಮೇಳ ಹಾಗೂ ಜನಪದ ಕಲರವ ಕಾರ್ಯಕ್ರಮ ನಡೆಯಿತು
- ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಹೇಳಿಕೆ
ಕೆ.ಎಂ.ದೊಡ್ಡಿ: ಆಮಿಷಗಳಿಗೆ ಬಲಿಯಾಗಿ ಮತಾಂತರಗೊಳ್ಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹದೇಶ್ವರ ಹಾಗೂ ಮಂಟೇಸ್ವಾಮಿ ನೀಲಗಾರರ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ ಸಲಹೆ ನೀಡಿದರು.
ಸಮೀಪದ ಮಠದ ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನೀಲಗಾರರ ಮೇಳ ಹಾಗೂ ಜನಪದ ಕಲರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಟೇಸ್ವಾಮಿ ಸಮಾಜಕ್ಕೆ ಬೆಳಕು ನೀಡಲು ಪರಂಜ್ಯೋತಿಯಾಗಿ ಉತ್ತರದೇಶದಿಂದ ದಕ್ಷಿಣ ಪ್ರಾಂತ್ಯಕ್ಕೆ ಬಂದು ಮಕ್ಕಳನ್ನು ಪಡೆದು ಪವಿತ್ರಗೊಳಿಸಿ ನೀಲಗಾರರನ್ನಾಗಿ ಮಾಡಿದರು. ಆ ಮೂಲಕ ನೀಲಗಾರರ ಪರಂಪರೆಯನ್ನು ಆರಂಭಿಸಿದರು ಎಂದು ಹೇಳಿದರು.
ಆದಿ ಹೊನ್ನಾಯಕನಹಳ್ಳಿ ಧರೆಗೆ ದೊಡ್ಡವರಿಗೆ ಹೆಸರು ನೀಡಿದ ಪುಣ್ಯಸ್ಥಳ. ಮಠಾಧಿಪತಿ ಎಂ.ಎಲ್ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅವರು ಹೊನ್ನಾಯಕಹಳ್ಳಿ, ಮಳವಳ್ಳಿ ಮಂಟೇಸ್ವಾಮಿ ಮಠ, ಕಪ್ಪಡಿ ರಾಚಪ್ಪಾಜಿ ಮಠಗಳನ್ನು ಅಭಿವೃದ್ಧಿಗೊಳಿಸುವುದರ ಮೂಲಕ ನೀಲಗಾರರ ಸಂಪ್ರದಾಯವನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಜಾನಪದ ಕಲೆ ನಶಿಸಿದರೆ ಗ್ರಾಮೀಣ ಸಂಸ್ಕೃತಿಯೂ ಕಣ್ಮರೆಯಾಗುವ ಸನ್ನಿವೇಶ ಎದುರಾಗುವುದರಿಂದ ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಹೆಚ್ಚಾಗಿ ನಡೆಯಬೇಕು ಎಂದರು.
ಮುಖಂಡ ಎಸ್.ಸಿದ್ದೇಗೌಡ ಮಾತನಾಡಿ, ಜಾನಪದ ಪ್ರತಿಯೊಬ್ಬರ ನಡತೆಯನ್ನು ಎಚ್ಚರಿಸುವ ಸಾಧನವಾಗಿದೆ. ಜಾನಪದ ಪದದಲ್ಲಿರುವ ಅರ್ಥವನ್ನು ಅರ್ಥೈಸಿಕೊಂಡರೆ ಜೀವನದಲ್ಲಿ ಸಾರ್ಥಕವನ್ನು ಕಾಣಬಹುದಾಗಿದೆ. ನೀಲಗಾರರು ಮತ್ತು ಜಾನಪದ ಒಂದೇ ನಾಣ್ಯದ ಎರಡು ಮುಖ ಎಂದು ತಿಳಿಸಿದರು.
ಜಾನಪದ ಕಲಾ ತಂಡಗಳ ಪ್ರದರ್ಶನ, ಜಾನಪದ ಗಾಯನ ಗಮನ ಸೆಳೆಯಿತು. ಹಿರಿಯ ಮುಖಂಡರನ್ನು ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ಮಠದ ಆಡಳಿತ ಕಾರ್ಯದರ್ಶಿ ಪ್ರಕಾಶ್, ಮುಖಂಡರಾದ ಪ್ರಕಾಶ್, ಗಂಗಾಧರ್, ರಾಜಣ್ಣ, ಶ್ರೀನಿವಾಸ್, ಸ್ವಾಮಿ, ವಿಷಕಂಠೇಗೌಡ, ಎಚ್.ಕೆ ಸ್ವಾಮಿ, ಅಂಬರೀಷ್, ಯೋಗನಂದ್, ದಾಸಪ್ಪ, ಕುಳ್ಳಪ್ಪ, ಎಸ್.ಸಿದ್ದೇಗೌಡ ಇತರರು ಇದ್ದರು.