ಮಳವಳ್ಳಿ ತಾಲೂಕಿನ ಬಿ.ಪಿ.ಪುರ ಶ್ರೀ ಮಂಟೇಸ್ವಾಮಿ ಮಠದ ಪೀಠಾಧಿಕಾರಿ ಶ್ರೀ ಜ್ಞಾನಾನಂದ ಚೆನ್ನೇರಾಜೇಅರಸ್ ಅವರ ಜನ್ಮದಿನದ ಅಂಗವಾಗಿ ಶ್ರೀ ಮಠದ ಭಕ್ತವೃಂದ ಜನ್ಮಾಷ್ಠಾಮಿ ಸಮಾರಂಭ ಹಮ್ಮಿಕೊಂಡಿದ್ದರು. ಸಂಜಯ್ ವೀರರಾಜೇಅರಸ್, ಚೇತನ್ ರಾಜೇಅರಸ್, ಕುಟುಂಬಸ್ಥರು, ಭಕ್ತರು ಇದ್ದರು. 
ಮಂಡ್ಯ

ಭಕ್ತರಿಗೆ ಶ್ರೀ ಮಂಟೇಸ್ವಾಮಿ ಒಳಿತು ಮಾಡಲಿ

ಲೋಕೇಶ್ ಮನು. ಡಿ
ಮಳವಳ್ಳಿ: ಬಿ.ಜಿ.ಪುರ ಗ್ರಾಮದಲ್ಲಿರುವ ಪವಾಡ ಪುರುಷ ಧರೆಗೆ ದೊಡ್ಡವರು ಶ್ರೀ ಮಂಟೇಸ್ವಾಮಿ ಮಠದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನೇರಾಜೇಅರಸ್ ಅವರು 60 ವಸಂತ ಪೂರೈಸಿದ ಹಿನ್ನೆಲೆ ಹಾಗೂ ಪುತ್ರ ಉತ್ತರಾಧಿಕಾರಿ ಹಿತೇಶ್ ಅರಸ್ ಅವರಿಗೆ 30 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬುಧವಾರ ನೀಲಗಾರ ಪರಂಪರೆ ಭಕ್ತವೃಂದ ಮಠದ ಆವರಣದಲ್ಲಿ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೀಠಾಧಿಕಾರಿ ಶ್ರೀ ಜ್ಞಾನಾನಂದ ಚೆನ್ನೇರಾಜೇ ಅರಸ್ ಅವರು ಶ್ರೀ ಮಂಟೇಸ್ವಾಮಿ ಗದ್ದುಗೆ ಹಾಗೂ ಮಠದ ಬಸವ, ಫಲಾರದಯ್ಯನ ಗದ್ದುಗೆ ಉರಿಗದ್ದಿಗೆ ಮತ್ತು ಮುಟ್ಟನಹಳ್ಳಿ ತೋಪಿನಲ್ಲಿರುವ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಪೂಜಾ ಕಾರ್ಯದಲ್ಲಿ ಮಠಾಧೀಶರ ಪತ್ನಿ ಸನ್ಮತಿ ಅಮ್ಮನವರು ಪಾಲ್ಗೊಂಡಿದ್ದರು.
ಮಠದ ಆವರಣದಲ್ಲಿ ಕಪ್ಪಡಿ, ಚಿಕ್ಕಲೂರು, ಕುರುಬನಕಟ್ಟೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯ ನೀಲಗಾರ ಭಕ್ತವೃಂದ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪೀಠಾಧಿಕಾರಿಗಳು ಭಕ್ತರನ್ನು ಆಶೀರ್ವದಿಸಿದರು.
ಈ ವೇಳೆ ಭಕ್ತರು ಹಾಗೂ ಸಿಬ್ಬಂದಿ ಹಾರ-ತುರಾಯಿಗಳೊಂದಿಗೆ ಹೂಮಳೆಗರೆದು ಪೀಠಾಧಿಕಾರಿಯನ್ನು ಗೌರವಿಸಿದರು. ಕುಟುಂಬದವರು ಪಾದಪೂಜೆ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಶ್ರೀ ಜ್ಞಾನಾನಂದ ಚೆನ್ನೇರಾಜೇಅರಸ್ ಮಾತನಾಡಿ, ಸದಾ ಪೂಜೆ, ಪ್ರಾರ್ಥನೆಯಲ್ಲಿ ತೊಡಗಿರುವ ನಾವು ಇಂದಿನವರೆಗೆ ಯಾವುದೇ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಆದರೆ, ನೀಲಗಾರರು, ಮಠದ ಸಿಬ್ಬಂದಿ ಹಾಗೂ ಭಕ್ತರ ಒತ್ತಾಯದ ಆಶಯದಂತೆ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಭಾವುಕರಾದರು.
ಶ್ರೀಮಠದ ಭಕ್ತವೃಂದಕ್ಕೆ ಶ್ರೀ ಮಂಟೇಸ್ವಾಮಿ ಒಳಿತನ್ನು ಮಾಡಲಿ. ಸುಖ, ನೆಮ್ಮದಿಯಿಂದ ಬಾಳಲಿ. ಗ್ರಾಮಗಳಲ್ಲಿ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗುವಂತೆ ಹಾರೈಸಿದರು.
ಹಿತೇಶ್ ರಾಜೇಅರಸ್ ಮಾತನಾಡಿ, ಪೀಠಾಧೀಶರ ಜನ್ಮದಿನದ ಅಂಗವಾಗಿ ಭಕ್ತರಿಗೆ ಪ್ರಸಾದ ವಿನಿಯೋಗ, ಸುತ್ತಮುತ್ತಲಿನ ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿ ಹಾಗೂ ಸಿಹಿ ವಿತರಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಚಿಕ್ಕಲ್ಲೂರು ನೀಲಗಾರ ಭಕ್ತರು ಪೀಠಾಧಿಕಾರಿಗಳಿಗೆ ಚಿನ್ನದ ಕಡಗವನ್ನು ತೊಡಿಸಿ ಶುಭಕೋರಿದರು. ಸಮಾರಂಭದಲ್ಲಿ ಶ್ರೀಮಠದ ವಂಶಸ್ಥರಾದ ಸಂಜಯ್ ವೀರರಾಜೇಅರಸ್, ಚೇತನ್ ರಾಜೇಅರಸ್, ಕುಟುಂಬಸ್ಥರು, ಮುಖಂಡರು, ಮಠದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.