ಮಳವಳ್ಳಿ ತಾಲೂಕಿನ ನೆಲ್ಲಿಗೆರೆ ಗ್ರಾಮದಲ್ಲಿ ಸೋಮವಾರ ನಡೆದ ಕನಕಪುರ ದೇಗುಲ ಮಠದ ಲಿಂಗೈಕ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಂಸ್ಮರಣೆ ಮಹೋತ್ಸವ ಕಾರ್ಯಕ್ರಮವನ್ನು ಶ್ರೀ ಚೆನ್ನಬಸವ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿ ಇದ್ದರು.  
ಮಂಡ್ಯ

ಮಾತೃಹೃದಯಿ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ

ಮಳವಳ್ಳಿ:

ವೀರಶೈವ ಧರ್ಮಗುರುಗಳಾಗಿ ಮಠದ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಎಲ್ಲ ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ಕನಕಪುರ ದೇಗುಲ ಮಠದ ಲಿಂಗೈಕ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರು ನಾಡಿಗೆ ಮಾತೃಹೃದಯದ ಸಿಂಚನ ನೀಡಿದ ಮಹಾನ್ ತ್ಯಾಗಮಯಿ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲೂಕಿನ ನೆಲ್ಲಿಗೆರೆ ಗ್ರಾಮದಲ್ಲಿ ಶ್ರೀ ಪಟ್ಟದ ಮಠ ಹಾಗೂ ಗ್ರಾಮಸ್ಥರ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಲಿಂಗೈಕ್ಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರ ಸಂಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನಕಪುರ ದೇಗುಲ ಮಠದ ಪೀಠಾಧಿಪತಿಗಳಾಗುವ ಮುನ್ನ ನೆಲ್ಲಿಗೆರೆ ಮಠದಲ್ಲಿ ಸುಮಾರು 9 ವರ್ಷಗಳ ಮಠಾಧಿಪತಿಗಳಾಗಿದ್ದ ಶ್ರೀಗಳು ಧಾರ್ಮಿಕ ಸೇವಾ ಕಾರ್ಯಗಳ ಜತೆಗೆ ಈ ಭಾಗದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾಯಕಲ್ಪಿತರಾಗಿದ್ದರು. ಆ ಮೂಲಕ ಸುತ್ತಮುತ್ತಲ ಗ್ರಾಮಗಳ ಎಲ್ಲ ಭಕ್ತರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡಿದ ಚಿರ ಸ್ಮರಣೀಯರಾಗಿದ್ದಾರೆ ಎಂದು ಬಣ್ಣಿಸಿದರು.
ಕನಕಪುರ ದೇಗುಲ ಮಠವನ್ನು ಇಡೀ ರಾಜ್ಯಕ್ಕೆ ಮಾದರಿ ಮಠವನ್ನಾಗಿ ನಿರೂಪಿಸುವ ಮೂಲಕ ಎಲ್ಲ ಮಠಾಧೀಶರಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದು, ಆವರ ತತ್ವ ಸಾಮಾಜಿಕ ಕಾಳಜಿ ನಮಗೆಲ್ಲ ಆದರ್ಶಪ್ರಾಯ ಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಉನ್ನತ ಶಿಕ್ಷಣ ಪಡೆದು ಕೃಷಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸುತ್ತಿರುವಾಗಲೇ ಅಧಿಕಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿ ಸಮಾಜ ಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಶ್ರೀ ಮುಮ್ಮಡಿ ನಿರ್ವಾಣ ಶ್ರೀಗಳು. ಅವರ ತ್ಯಾಗಮಯ ಜೀವನ ನಮಗೆಲ್ಲ ದಾರಿದೀಪವಾಗಿದೆ ಎಂದು ಸ್ಮರಿಸಿದರು.
ಕನಕಪುರ ದೇಗುಲ ಮಠದ ಡಾ.ಶ್ರೀ ಚೆನ್ನಬಸವ ಸ್ವಾಮೀಜಿ ಸಮಾರಂಭವನ್ನು ಉದ್ಗಾಟಿಸಿದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಡಿ.ಎಸ್.ಸದಾಶಿವಮೂರ್ತಿ ಅವರು ಗುರಸ್ಮರಣೆ ಮಾಡಿದರು. ನೆಲ್ಲಿಗೆರೆ ಪಟ್ಟದ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
-