ವಿ.ಸಿ.ಉಮಾಶಂಕರ್ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ 
ಮಂಡ್ಯ

9ರಂದು ಚನ್ನಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ
  • ಕನ್ನಡ ಶಾಲೆಗಳನ್ನು ಮುಚ್ಚದಂತೆ ಹಾಗೂ ಮೇಕೆದಾಟು ಯೋಜನೆ ಶೀಘ್ರವಾಗಿ ಪ್ರಾರಂಭಿಸುವಂತೆ
ಮದ್ದೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ, ಕನ್ನಡ ಶಾಲೆಗಳನ್ನು ಮುಚ್ಚದಂತೆ ಹಾಗೂ ಮೇಕೆದಾಟು ಯೋಜನೆ ಶೀಘ್ರವಾಗಿ ಪ್ರಾರಂಭಿಸುವಂತೆ ಒತ್ತಾಯಿಸಿ ಜ.9ರಂದು ಚನ್ನಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ತಿಳಿಸಿದರು.
ರಾಜ್ಯದ ವಿವಿಧ ಪ್ರಮುಖ ಇಲಾಖೆಗಳಲ್ಲಿ 3.80 ಲಕ್ಷ ಹುದ್ದೆಗಳು ಖಾಲಿಯಿದ್ದು, ಕೃಷಿ ಇಲಾಖೆ 6876, ಪಶುಸಂಗೋಪನೆ 11,020, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 8526, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 6190, ಹಣಕಾಸು ಇಲಾಖೆ 7668, ಮೀನುಗಾರಿಕೆ 838 ಆಹಾರ ಮತ್ತು ನಾಗರಿಕ ಪೂರೈಕೆ 1442, ಅರಣ್ಯ 6478 ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ 37,572, ಉನ್ನತ ಶಿಕ್ಷಣ 13,599, ಕಂದಾಯ 10867 ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ 10,504, ಪರಿಶಿಷ್ಟ ಜಾತಿ ಕಲ್ಯಾಣ 9646 ಶಿಕ್ಷಣ 79,694 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 3391 ಹುದ್ದೆಗಳು ಖಾಲಿಯಿದ್ದು, ನಾಡಿನಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಲು ನಮ್ಮನಾಳುತ್ತಿರುವ ಸರ್ಕಾರಗಳೇ ಕಾರಣ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅದೆಷ್ಟೋ ಕುಟುಂಬಗಳು ತಮ್ಮ ಮಕ್ಕಳುಗಳನ್ನು ಕೂಲಿ ನಾಲಿ ಮಾಡಿ ವಿದ್ಯಾವಂತ ಪದವೀಧರರನ್ನಾಗಿ ಮಾಡಿ ಎಲ್ಲೋ ಒಂದು ಕಡೆ ನಮ್ಮ ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಆಸೆಗೆ ತಣ್ಣೀರೆರಚಿದಂತಾಗಿದೆ ಎಂದರು.
ಈ ಹಿಂದೆಯಿದ್ದ ಸರ್ಕಾರಗಳು ಇಲಾಖೆಗಳಲ್ಲಿ ಉದ್ಯೋಗ ಮಾಡುತ್ತಿರುವ ನೌಕರರು ನಿವೃತ್ತಿಯಾದ ಕೆಲ ದಿನಗಳಲ್ಲಿ ಭರ್ತಿ ಮಾಡುತ್ತಿದ್ದರು ಆದರೆ ಪ್ರಸ್ತುತ ಸಂದರ್ಭ ತಾತ್ಕಾಲಿಕ ಉದ್ಯೋಗಿಗಳನ್ನು ನಿಯೋಜಿತ ಸ್ಥಳಕ್ಕೆ ಹಾಕಿ ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿರುವ ಉದಾಹರಣೆಗಳೂ ಉಂಟು. ಹಾಗಾಗಿ ಸರ್ಕಾರ ನಾಡಿನಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೇದಿಕೆಯ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗು, ತಾಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಸಂಘಟನಾ ಕಾರ್ಯದರ್ಶಿ ಉಮೇಶ್, ಗೌರವಾಧ್ಯಕ್ಷರಾದ ವಿ.ಎಚ್.ಶಿವಲಿಂಗಯ್ಯ, ಆಲೂರು ಚನ್ನಪ್ಪ, ಯುವ ಘಟಕದ ಅಧ್ಯಕ್ಷ ವಿಶ್ವಾಸ್ ಹಾಗೂ ಪಟೇಲ್ ಹರೀಶ್, ಎಂ.ವೀರಪ್ಪ, ನಿವೃತ್ತ ಶಿಕ್ಷಕ ನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.