ಇತ್ತೀಚೆಗೆ ನಿಧನರಾದ ಮೇಲುಕೋಟೆಯ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಂ.ಮರಿಯಪ್ಪರಿಗೆ ಶ್ರದ್ಧಾಂಜಲಿ-ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
- ಶ್ರದ್ಧಾಂಜಲಿ-ನುಡಿನಮನ ಕಾರ್ಯಕ್ರಮ
- ಡಾ.ವಿ.ವೆಂಕಟರಾಮೇಗೌಡ ಬಣ್ಣನೆ
ಡಾ.ವಿ.ವೆಂಕಟರಾಮೇಗೌಡ ಬಣ್ಣನೆ
ಮೇಲುಕೋಟೆ: ಜ್ಞಾನಮಂಟಪವಾದ ಮೇಲುಕೋಟೆಯ ಶೈಕ್ಷಣಿಕ ಅಭಿವೃದ್ಧಿಗೆ ನಿವೃತ್ತ ಮುಖ್ಯಶಿಕ್ಷಕ ಎಂ.ಮರಿಯಪ್ಪ ಗಣನೀಯ ಸೇವೆ ಮಾಡುವ ಜತೆಗೆ ಆದಿಚುಂಚನಗಿರಿ ಶಾಖಾ ಮಠದ ಬೆಳವಣಿಗೆಯಲ್ಲೂ ಶ್ರಮಿಸಿದ್ದಾರೆ ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ.ವಿ.ವೆಂಕಟರಾಮೇಗೌಡ ಬಣ್ಣಿಸಿದರು.
ಮೇಲುಕೋಟೆಯ ಅಹೋಬಲಮಠದ ಸಭಾಂಗಣದಲ್ಲಿ ಎಂ.ಮರಿಯಪ್ಪರಿಗೆ ಅಭಿಮಾನಿಗಳು, ನಾಗರಿಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ-ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೌಢಶಾಲೆಗೆ ಬರುತ್ತಿದ್ದ ಬಡಮಕ್ಕಳ ಶಿಕ್ಷಣಕ್ಕೆ ವೈಯಕ್ತಿಕ ನೆರವು ನೀಡುತ್ತಿದ್ದ ಮರಿಯಪ್ಪ ಅವರು ಯದುಶೈಲ ಶಾಲೆಯ ಸಹಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಸ್ಫೂರ್ತಿ ನೀಡುತ್ತಿದ್ದರು. ಉನ್ನತ ಶಿಕ್ಷಣಕ್ಕೂ ಸಹಾಯ ಮಾಡುತ್ತಿದ್ದರು. ಯದುಶೈಲ ಪ್ರೌಢಶಾಲೆಯನ್ನು ಮಾದರಿಯಾಗಿ ರೂಪಿಸಿದ್ದರು. ಆದರೆ 2025ರಲ್ಲಿ ಶಾಲೆ ಮುಚ್ಚಿರುವುದು ವಿಷಾದನೀಯ ಸಂಗತಿಯಾಗಿದೆ. ಮರಿಯಪ್ಪನವರು ಆದಿಚುಂಚನಗಿರಿಯ ಶ್ರೀಗಳಾಗಿದ್ದ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥಸ್ವಾಮೀಜಿ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಮೇಲುಕೋಟೆಯ ಆದಿಚುಂನಗಿರಿ ಮಠದ ಬೆಳವಣಿಗೆ ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆಯ ಆರಂಭಕ್ಕೆ ಹಲವು ಕೊಡುಗೆ ನೀಡಿರುವುದು ಪ್ರಮುಖ ಸಂಗತಿಯಾಗಿದೆ ಎಂದರು.
ಮುಖ್ಯಶಿಕ್ಷಕ ಅಣ್ಣೇಗೌಡ, ವಾದ್ಯಾರ್ ತಿರುಮಲೈ, ಶಿಕ್ಷಣ ಸಂಯೋಜಕ ಲಿಂಗರಾಜು, ಪರಿಸರತಜ್ಞ ಸಂತೋಷ್‌ಕೌಲಗಿ, ಬಳಿಘಟ್ಟ ಶಿಕ್ಷಕ ರಾಮೇಗೌಡ, ಮುಖ್ಯಶಿಕ್ಷಕ ಸ್ಥಾನೀಕಂ ಸಂತಾನರಾಮನ್, ಪುಳಿಯೋಗರೆ ರವಿ ಮತ್ತಿತರರು ಮಾತನಾಡಿದರು.
ಕುಟುಂಬದ ಪರವಾಗಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಈಶಮುರಳಿ ಮತ್ತು ಮಹೇಶ್ ಗಣ್ಯರ ಆಶಯದಂತೆ ಪ್ರತಿವರ್ಷ ಎಂ.ಮರಿಯಪ್ಪ ಅವರ ನೆನಪಲ್ಲಿ ಮೇಲುಕೋಟೆಯಲ್ಲಿ ಬಡಮಕ್ಕಳಿಗೆ ಅನುಕೂಲವಾಗುವಂತಹ ಶೈಕ್ಷಣಿಕ ಕಾರ್ಯವನ್ನು ಮಾಡಲಾಗುವುದು. ಈ ಮೂಲಕ ಅವರ ಸೇವೆಯನ್ನು ನಿರಂತರವಾಗಿ ನೆನೆಯುವ ಕಾರ್ಯಮಾಡಲಾಗುತ್ತದೆ ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಮೇಲುಕೋಟೆಯ ಗಣ್ಯರು ಅಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಹೋಬಲಮಠದ ಶಶಿಕುಮಾರ್ ಕಾರ್ಯಕ್ರಮಕ್ಕೆ ಸಭಾಂಗಣ ವ್ಯವಸ್ಥೆ ಕಲ್ಪಿಸಿದ್ದರು.