ಏಕರೂಪದ ಶಿಕ್ಷಣ ಜಾರಿಗೆ ಒತ್ತಾಯಿಸಿ ಮಂಡ್ಯದಲ್ಲಿ ರೈತ ಮತ್ತು ವಿವಿಧ ಕನ್ನಡಪರ ಸಂಘಟನೆ ಮುಖಂಡರು ಪಾದಯಾತ್ರೆ ಆರಂಭಿಸಿದರು.  
ಮಂಡ್ಯ

ಏಕರೂಪದ ಶಿಕ್ಷಣಕ್ಕಾಗಿ ಪಾದಯಾತ್ರೆ ಆರಂಭ: ರೈತ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಆಯೋಜನೆ

ಮಂಡ್ಯ: ಏಕರೂಪ ಸಮಾನ ಶಿಕ್ಷಣ ಜಾರಿಗೊಳಿಸುವುದು, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ದ್ವಿಭಾಷೆಯಲ್ಲಿ ಸಿಬಿಎಸ್‌ಇ ಗುಣಮಟ್ಟದ ಶಿಕ್ಷಣ ಹಾಗೂ ಮೂಲ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈತ ಮತ್ತು ವಿವಿಧ ಕನ್ನಡಪರ ಸಂಘಟನೆ ಮುಖಂಡರು ನಗರದಿಂದ ಪಾದಯಾತ್ರೆ ಆರಂಭಿಸಿದರು.
ಸರ್‌ಎಂ.ವಿ.ಪ್ರತಿಮೆ ಎದುರು ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ನೇತೃತ್ವದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಇದಕ್ಕೆ ಕೆಆರ್‌ಎಸ್ ಪಕ್ಷ ಸಾಥ್ ನೀಡಿತು. ಸುಮಾರು 60 ದಿನ ಜಿಲ್ಲಾದ್ಯಂತ ಪಾದಯಾತ್ರೆ ನಡೆಯಲಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ 6ನೇ ತರಗತಿಯಿಂದ ಪಿಯುಸಿವರೆಗೆ ನವೋದಯ ಮಾದರಿ ಸಿಬಿಎಸ್‌ಇ ಗುಣಮಟ್ಟದ ವಸತಿ ಶಾಲಾ ಶಿಕ್ಷಣ ನೀಡಬೇಕು. ಸರ್ಕಾರಕ್ಕೆ ನಡೆಸಲು ಸಾಧ್ಯವಿಲ್ಲದಿದ್ದರೆ, ಶಿಕ್ಷಣ ಇಲಾಖೆಯು ಅನುದಾನವನ್ನು ನೇರವಾಗಿ ಪ್ರತಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಖಾತೆಗೆ ವರ್ಗಾಹಿಸುವ ಮೂಲಕ ಹಾಲಿನ ಡೇರಿ ರೀತಿ ಎಸ್‌ಡಿಎಂಸಿ ಅವರೇ ಶಿಕ್ಷಣದ ನೇಮಕ ಮಾಡಿ, ಮೂಲ ಸೌಕರ್ಯ ಒದಗಿಸಿ ಶಾಲೆಗಳನ್ನು ಮುನ್ನಡೆಸುತ್ತಾರೆ. ಇವರಿಂದ ಸರ್ಕಾರಿ ಶಾಲೆಗಳಿಗೆ ಬೀಗ ಹಾಕುವ ಕೆಲಸಕ್ಕೆ ಶಾಶ್ವತವಾಗಿ ತೆರೆ ಎಳೆಯಲಿದ್ದಾರೆ ಎನ್ನುವುದು ಪಾದಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.
ಇಂಡುವಾಳು ಚಂದ್ರಶೇಖರ್ ಮಾತನಾಡಿ, ನಗರದಿಂದ ಪಾದಯಾತ್ರೆ ಆರಂಭಿಸಿದ್ದೇವೆ. ಚಿಕ್ಕಮಂಡ್ಯ, ಗೋಪಾಲಪುರ, ಹುಲಿವಾನ, ಬಿ.ಹೊಸೂರು, ಬಿಳಿದೇಗಲು ಮಾರ್ಗವಾಗಿ ಸಾಗಿ ಉಪ್ಪರಕನಹಳ್ಳಿಯಲ್ಲಿ ವಾಸ್ತವ್ಯ ಮಾಡುವೆವು. ಎರಡನೇ ದಿನ ದೊಡ್ಡಗರುಡನಹಳ್ಳಿ ಮೂಲಕ ಹಲವು ಗ್ರಾಮಗಳ ರಸ್ತೆ ಮಾರ್ಗದ ಮೂಲಕ ಸಾಗುವೆವು ಎಂದರು.
ಮುಖಂಡರಾದ ಸಂತೋಷ್‌ಗೌಡ, ತೇಜಸ್ ಕೋಡಿಶೆಟ್ಟಿಪುರ, ಶಿವಳ್ಳಿ ಚಂದ್ರಶೇಖರ್, ಕೋಲಾರ ನಾಗರಾಜು, ಹುಬ್ಬಳ್ಳಿ ರವಿಚಂದ್ರ, ಹಾವೇರಿ ಮಲ್ಲನಗೌಡ, ಹೊನ್ನಾವರ ಎಂ.ಜಿ.ಭಟ್, ಶ್ರೀಕಾಂತ್, ರಮೇಶ್‌ಗೌಡ, ಅರುಣ್‌ಕುಮಾರ್, ಅನಿಲ್, ನಾಗರಾಜು, ದೀಪಿಕಾ, ಮಲ್ಲೇಶ್ ಹೆಬ್ಬಕವಾಡಿ ಇತರರಿದ್ದರು.