ಮಳವಳ್ಳಿ ತಾಲೂಕಿನ ಬಿ.ಜಿ.ಪುರದಲ್ಲಿ ಎದುರು ಸೇವೆ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದ ಭಕ್ತ ಸಮೂಹ.
ಮಳವಳ್ಳಿ: ತಾಲೂಕಿನ ಪುಣ್ಯಕ್ಷೇತ್ರ ರಾಜ ಬೋಪ್ಪೇಗೌಡನಪುರ (ಬಿ.ಜಿ.ಪುರ) ಗ್ರಾಮದಲ್ಲಿ ಮಂಟೇಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಮಠಕ್ಕೆ ನುಗ್ಗುವ(ಎದುರು) ಸೇವೆ ಇತ್ತೀಚೆಗೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ಮಂಟೇಸ್ವಾಮಿ ಗದ್ದುಗೆ ದರ್ಶನ ಪಡೆದರು.
ಗ್ರಾಮದ ಶ್ರೀ ಮಂಟೇಸ್ವಾಮಿ ಮಠಕ್ಕೆ ಯುಗಾದಿ ಹಬ್ಬದ ಮುನ್ನ ದಿನ ಗದ್ದುಗೆ ದರ್ಶನ ಪಡೆಯಲು ಭಕ್ತರು ರಾಚಪ್ಪಾಜಿ ನೆಲೆಗೊಂಡ ಕಪ್ಪಡಿ ಕ್ಷೇತ್ರದ ಸೇವೆ ಮುಗಿಸಿ, ಹುಲ್ಲಂಬಳ್ಳಿ, ಪೂರಿಗಾಲಿ, ಬಳಗೆರೆ ತೋಪು, ಸರಗೂರು, ಮುಟ್ಟನಹಳ್ಳಿ ತೋಪುಗಳಲ್ಲಿ ವಾಸ್ತವ್ಯ ಹೂಡಿದ್ದರು. ಮರು ದಿನ ಮುಟ್ಟನಹಳ್ಳಿ ದೊಡ್ಡಮ್ಮತಾಯಿ ದೇವಿಯ ದರ್ಶನ ಪಡೆದು ನಂತರ ಕಾಲ್ನಡಿಗೆ ಮೂಲಕ ಬಿ.ಜಿ.ಪುರದಲ್ಲಿರುವ ಮಂಟೇಸ್ವಾಮಿ ಮಠದ ಗದ್ದುಗೆಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಯುಗಾದಿ ಸಂಭ್ರಮ: ಯುಗಾದಿಯಂದು ಜಾತ್ರೆ ಹಾಗೂ ಪಂಕ್ತಿ ಸೇವೆಗಳು ನಡೆಯುವುದು ವಾಡಿಕೆ. ಮಂಟೇಸ್ವಾಮಿ ಐಕ್ಯ ಗದ್ದುಗೆ ದರ್ಶನ ಪಡೆಯಲು ಬರುವ ಭಕ್ತರಿಗೆ ಹರಕೆ ಹೊತ್ತ ಜನರು ನೀರು, ಪಾನಕ, ಮಜ್ಜಿಗೆ ನೀಡಿದರು. ಶ್ರೀಮಠ ಹಾಗೂ ಹೊರಮಠ, ಸರಗೂರು ಹೊಸಮಠಗಳ ವತಿಯಿಂದ ಅಲ್ಲಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಮುಟ್ಟನಹಳ್ಳಿ ತೋಪಿನ ದೊಡ್ಡಮ್ಮ ತಾಯಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದ ಮಳವಳ್ಳಿ ಮಠದ ಪೀಠಾಧ್ಯಕ್ಷ ಶ್ರೀ ಎಂ.ಎಲ್.ವರ್ಚಸ್ವಿ ಸಿದ್ದಲಿಂಗರಾಜೇ ಅರಸು ಅವರನ್ನು ಸಂಪ್ರದಾಯದಂತೆ ಬಸವ, ಕೊಂಬು, ಕಹಳೆ, ಪೆಂಜು, ಹತ್ತಾರು ಕಠಾಯ, ಸತ್ತಿಗೆ, ಛತ್ರಿ ಚಾಮರ ಸೇರಿದಂತೆ ನೂರಾರು ನೀಲಗಾರರು ಬಿದಿರು (ಬೆತ್ತ) ಜೋಳಿಗೆ ಜತೆ ತಮಟೆ, ಕೊಂಬು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಅವರು ದೊಡ್ಡಮ್ಮತಾಯಿ ದೇವಸ್ಥಾನದ ಉರಿಗದ್ದುಗೆ ಮೇಲೆ ಕುಳಿತು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಿದರು.