ಶ್ರೀರಂಗಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ತಟ್ಟೆ ಹಿಡಿದು ಭಿಕ್ಷಾಟನೆ ಜತೆಗೆ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. 
ಮಂಡ್ಯ

ಮಂಡ್ಯ ರಕ್ಷಣಾ ವೇದಿಕೆ ಪ್ರತಿಭಟನೆ

ಲಲಾಟಾಕ್ಷ ಎಸ್
ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿರ್ವಹಣಾ ಸಮಿತಿ(ಸಿಡಬ್ಲೂಸಿ) ಆದೇಶ ವಿರೋಧಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ತಟ್ಟೆ ಹಿಡಿದು ಭಿಕ್ಷಾಟನೆ ಮಾಡುವ ಜತೆಗೆ ಉರುಳು ಸೇವೆ ಮೂಲಕ ಆಕ್ರೋಶ ಹೊರಹಾಕಿದರು.
ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಬರಗಾಲಕ್ಕೆ ತುತ್ತಾಗುವ ಜತೆಗೆ ಇನ್ನುಷ್ಟು ಸಮಸ್ಯೆ ಎದುರಿಸುವ ತೀವ್ರ ಆತಂಕದಲ್ಲಿ ರೈತರಿದ್ದಾರೆ. ಈ ನಡುವೆ ಕಾವೇರಿ ನೀರು ನಿರ್ವಹಣಾ ಸಮಿತಿ ನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿರುವುದು ಸರಿಯಲ್ಲ ಎಂದರು.
ಈ ಆದೇಶಕ್ಕೆ ರಾಜ್ಯ ಸರ್ಕಾರ ತಲೆ ಬಾಗಬಾರದು. ಒಂದು ವೇಳೆ ಒತ್ತಡಕ್ಕೆ ಮಣಿದು ಸರ್ಕಾರ ನೀರು ಹರಿಸಿದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಪದಾಧಿಕಾರಿಗಳಾದ ಟಿ.ಎಂ.ಹೊಸೂರು ಕುಮಾರ್, ಗಂಜಾಂ ವೆಂಕಟೇಶ್, ಕಲ್ಯಾಣಮ್ಮ, ಜಯಲಕ್ಷ್ಮೀ, ಗೋಪಮ್ಮ, ಮಾದಮ್ಮ, ಜಯಮ್ಮ ಭಾಗವಹಿಸಿದ್ದರು.