ಮಂಡ್ಯ ನಗರದ ಜೆ.ಸಿ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ, ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಮಂಡ್ಯ : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮತಿ ಸುಟ್ಟ ಐತಿಹಾಸಿಕ ದಿನ ಬೆಂಬಲಿಸಿ ದಲಿತ ಸಂಘರ್ಷ ಸಮಿತಿ, ಜನಶಕ್ತಿ ಹಾಗೂ ಪ್ರಗತಿಪರ ಸಂಘಟನೆಗಳಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜೆ.ಸಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮನುವಾದ ತೊಲಗಲಿ ಸಂವಿಧಾನ ಉಳಿಯಲಿ ಎಂಬ ಕೂಗಿನೊಂದಿಗೆ ಶ್ರೇಣಿಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದ ಮನುಸ್ಮೃತಿ ದಹಿಸುವುದರ ಜತೆಗೆ ಅಂಬೇಡ್ಕರ್ ಅವರ ಆಶಯ ನೆರವೇರುವವರೆಗೂ ಹೋರಾಟವು ನಿಲ್ಲವುದಿಲ್ಲ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಶ್ರೇಣಿಕೃತ ಜಾತಿ ವ್ಯವಸ್ಥೆಗೆ ಮುನ್ನುಡಿ ಬರೆದ ಮನುಸ್ಮೃತಿಯನ್ನು 1927ರ ಡಿ.25ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ದಹಿಸುವ ಮೂಲಕ ಸಮಸಮಾಜ ನಿರ್ಮಾಣಕ್ಕೆ ನಾಂದಿಯಾಡಿ 98 ವರ್ಷವಾಗಿದೆ. ಮನುಸ್ಮೃತಿ ಕಾನೂನು ಆಧಾರದ ಮೇಲೆ ರಾಜಾಡಳಿತ ವ್ಯವಸ್ಥೆಯಲ್ಲಿ ಶ್ರೇಣಿಕೃತ ವರ್ಣ, ಜಾತಿ, ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆಸೇವೆ, ದೇವದಾಸಿ ಪದ್ಧತಿ ಮುಂತಾದ ಅನಿಷ್ಠ ಪದ್ಧತಿಗಳು ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮೃತಿ ಸುಟ್ಟ ಐತಿಹಾಸಿಕ ಚಳವಳಿಯ ದಿನವಾಗಿದೆ ಎಂದು ಸ್ಮರಿಸಿದರು.
21ನೇ ಶತಮಾನದ ದಿನಗಳಲ್ಲಿನ ನಾಗರಿಕರ ಜೀವನ ವ್ಯವಸ್ಥೆಯ ಈ ಪರಿಸ್ಥಿತಿ ಬದಲಾಗಿಲ್ಲ. ಆರ್‌ಎಸ್‌ಎಸ್ ಮತ್ತು ಅದರ ರಾಜಕೀಯ ಪಕ್ಷವಾದ ಬಿಜೆಪಿ ಅಂದಿನಿಂದ ಇಂದಿನವರೆಗೂ ಆಂತರಿಕ ಹಾಗೂ ಬಹಿರಂಗವಾಗಿಯೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ಅಸಹಿಷ್ಣುತೆಯನ್ನು ಹೊರ ಹಾಕುತ್ತಲೇ ಬಂದಿದೆ. ಮನು ಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರಣೀತ, ಪ್ರಜಾತಾಂತ್ರಿಕ ಸಂವಿಧಾನವನ್ನು ನಾವು ರೂಪಿಸಿಕೊಂಡಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಇಂದು ಮತ್ತಷ್ಟು ಬಲಗೊಳ್ಳುತ್ತಿವೆ.
ಅಂಬೇಡ್ಕರ್, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಯುದ್ಧವನ್ನೇ ಸಾರಿವೆ. ಹಾಗಾಗಿ ಸಂವಿಧಾನ ಮತ್ತು ಪ್ರಜಾಪಭುತ್ವ ವ್ಯವಸ್ಥೆಯನ್ನು ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕಾಗಿ ಮನುಸ್ಮೃತಿ ದಹಿಸಿದ ದಿನವಾದ ಡಿ.25ರಂದು ಸಾಂಕೇತಿಕವಾಗಿ ನಾವೂ ಕೂಡ ಮನುಸ್ಮೃತಿ ಸುಟ್ಟು ಹಾಕುವ ಮೂಲಕ ಅಂಬೇಡ್ಕರ್ ಅವರ ಹೋರಾಟವನ್ನು ಮುಂದುವರಿಸಬೇಕಿದೆ ಎಂದು ಎಚ್ಚರಿಸಿದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಸೋಮಶೇಖರ್ ಕೆರಗೋಡು, ಸಿದ್ದರಾಜು, ಸಿ.ಕುಮಾರಿ, ಗಾಯಕ ಹುರುಗಾಲವಾಡಿ ರಾಮಯ್ಯ, ನಾರಾಯಣಸ್ವಾಮಿ ಮತ್ತಿತರರಿದ್ದರು.