ಮಂಡ್ಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿದರು. ಉಪಾಧ್ಯಕ್ಷರಾದ ಶಿವಣ್ಣ, ರಾಜೇಂದ್ರ, ಪ್ರಶಾಂತ್‌ಬಾಬು ಇದ್ದರು. 
ಮಂಡ್ಯ

ಮನೆ ಬಾಗಿಲಿಗೆ ಪಡಿತರ ಪೂರೈಕೆ

ಮಂಡ್ಯ: ಅನ್ನ ಸುವಿಧಾ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಏಕ ಸದಸ್ಯರಿರುವ ಪಡಿತರ ಚೀಟಿದಾರರಿಗೆ ಅನುಕೂಲವಾಗಲು ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು. 
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಮಿನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 75 ವರ್ಷ ಮೇಲ್ಪಟ್ಟ ಏಕ ಸದಸ್ಯರಿರುವ ಪಡಿತರ ಚೀಟಿದಾರರ ವರದಿ ತಯಾರಿಸಿ. ಅವರ ಮನೆ ಬಾಗಿಲಿಗೆ ಹೋಗಿ ಅನ್ನ ಸುವಿಧಾ ಯೋಜನೆಯ ಫಲಾನುಭವಿಯನ್ನಾಗಿ ನೋಂದಣಿ ಮಾಡಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೂಚಿಸಿದರು. 
ನ್ಯಾಯಬೆಲೆ ಅಂಗಡಿಗಳ ಮೂಲಕ ಅನ್ನ ಸುವಿಧಾ ಯೋಜನೆ ಕುರಿತು ಅರ್ಹ ಪಡಿತರ ಚೀಟಿದಾರರಿಗೆ ಮಾಹಿತಿ ತಲುಪಿಸಿ ಹಾಗೂ ಫಲಾನುಭವಿಗಳನ್ನು ನೋಂದಣಿ ಮಾಡಿಸಲು ಸಮಯ ಮತ್ತು ಗುರಿ ನಿಗದಿಪಡಿಸಬೇಕು. ಮುಂದಿನ ಸಭೆಯಲ್ಲಿ ಅರ್ಹ ಪಡಿತರ ಚೀಟಿದಾರರ ತಾಲೂಕುವಾರು ನೋಂದಣಿ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಯುವ ನಿಧಿ ಯೋಜನೆಯಡಿ ರೂಪಿತವಾಗಿರುವ ಯುವನಿಧಿ ಪ್ಲಸ್ ಯೋಜನೆಯಡಿ ಫಲಾನುಭವಿಗಳ ಆಸಕ್ತಿ ಮೇರೆಗೆ ಉದ್ಯೋಗ ಕಲ್ಪಿಸಲು ತರಬೇತಿ ಒದಗಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ತರಬೇತಿ ಪ್ರಾರಂಭವಾಗಿದ್ದು, ಫಲಾನುಭವಿಗಳು ನಿರ್ಲಕ್ಷೃ ತೋರದೆ ಯೋಜನೆಯ ಸದುಪಯೋಗಪಡೆದುಕೊಳ್ಳಿ ಎಂದರು. 
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 2023ರ ಜೂನ್ ಮಾಹೆಯಿಂದ 2025ರ ಅಕ್ಟೋಬರ್ ಮಾಹೆಯವರೆಗೆ ಒಟ್ಟು 1,733 ಲಕ್ಷ ಮಹಿಳೆಯರು ಉಚಿತವಾಗಿ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಇದಕ್ಕೆ 472 ಕೋಟಿ ರೂ.ಗೂ ಅಧಿಕ ಮೊತ್ತ ವೆಚ್ಚವಾಗಿದೆ ಎಂದರು. 
ಗೃಹಲಕ್ಷ್ಮೀ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳಲ್ಲಿ ಮನೆಯ ಯಜಮಾನಿ ಮರಣ ಹೊಂದಿರುವ ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಮನೆಯ ಯಜಮಾನಿ ಬದಲಾಯಿಸುವಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಹೇಳಿದರು. 
ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷ ರಾಜೇಂದ್ರ, ಪ್ರಶಾಂತ್‌ಬಾಬು, ಸದಸ್ಯರಾದ ರುದ್ರಪ್ಪ, ವೀಣಾ, ರಮೇಶ್, ಮಾದೇಶ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ನವೀನ್ ಕುಮಾರ್ ಇತರರಿದ್ದರು.